ಧಾರ್ಮಿಕ ಸಂಸ್ಕೃತಿಗೆ ಶರಣರ ಸೇವೆ ಅಪಾರ
ಹಾನಗಲ್ಲ: ಧಾರ್ಮಿಕವಾಗಿ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಬಸವಾದಿ ಶಿವಶರಣರು ಅಪ್ರತಿಮ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣೆ ಮತ್ತು ಸಂದೇಶಗಳ ಉಳಿವಿಗೆ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಅಗತ್ಯವಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನುಡಿದರು.
ತಾಲೂಕಿನ ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದಲ್ಲಿ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ 84ನೇ ಮತ್ತು ಮೌನತಪಸ್ವಿ ಲಿಂ. ಚನ್ನವೀರ ಸ್ವಾಮಿಗಳ 5ನೇ ಪುಣ್ಯಸ್ಮರಣೋತ್ಸವ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆಯುತ್ತಿರುವ ಅಕ್ಕಿಆಲೂರ ಉತ್ಸವದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ರಾಷ್ಟ್ರ ಹಾಗೂ ಧರ್ಮಭಕ್ತಿಯನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗಲಿದೆ. ನಮ್ಮ ಪರಂಪರೆಯಲ್ಲಿನ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಭಯ, ಭಕ್ತಿ ಮತ್ತು ಗೌರವಗಳಿಂದ ಪರಿಪಾಲಿಸಿದರೆ ಸದ್ಭಾವನೆ ಮೂಡಲಿದೆ. ಆ ಮೂಲಕ ಜೀವನಕ್ಕೆ ಉತ್ತಮ ಸಂಸ್ಕಾರ ದೊರೆಯಲಿದೆ ಎಂದರು.
ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಚನ್ನವೀರೇಶ್ವರ ಪ್ರಸಾದ ನಿಲಯ ಪಬ್ಲಿಕ್ ಟ್ರಸ್ಟ್ ಅಧ್ಯಕ್ಷ ಎನ್.ಸಿ. ಪಾವಲಿ, ಸದ್ಭಕ್ತ ಮಂಡಳಿಯ ಉದಯಕುಮಾರ ವಿರೂಪಣ್ಣನವರ, ಶಿವಕುಮಾರ ದೇಶಮುಖ, ಜಿ.ಎಂ. ಹಿರೇಮಠ, ಪುಟ್ಟಪ್ಪ ಜವಳಿ, ಚನ್ನವೀರಪ್ಪ ಬೆಲ್ಲದ, ನಂದೀಶ ಗೋದಿ, ರವಿ ಕೋರಿಶೆಟ್ಟರ, ಶಿವಬಸಪ್ಪ ತುಪ್ಪದ, ವೀರೇಶ ನೆಲವಿಗಿ, ಮಲ್ಲೇಶಪ್ಪ ನೆಲವಿಗಿ, ಮಹಾಂತೇಶ ಜಾಬೀನ, ಶಾಂತಯ್ಯಶಾಸ್ತ್ರಿ ಹಿರೇಮಠ, ಶಿವಣ್ಣ ಗಿರಿಯಪ್ಪನವರ, ಮುಖ್ಯೋಪಾಧ್ಯಾಯ ಎನ್.ಜಿ. ಲಮಾಣಿ, ವಿದ್ಯಾ ವಿರುಪಣ್ಣನವರ, ದೀಪಾ ವಿರೂಪಣ್ಣನವರ, ಹೇಮಾ ಮಹಲಿಂಗಶೆಟ್ಟರ ಮುಂತಾದವರು ಉಪಸ್ಥಿತರಿದ್ದರು. ರಾಜಣ್ಣ ಅಂಕಸಖಾನಿ ಸ್ವಾಗತಿಸಿದರು. ಷಣ್ಮುಖಪ್ಪ ಮುಚ್ಚಂಡಿ ನಿರ್ನಹಿಸಿದರು.