ಬಿಲ್ ಪಾವತಿಸಲು ವಿಳಂಬ: ಗುತ್ತಿಗೆದಾರರಿಂದ ಆರೋಪ
ಹಾವೇರಿ: ಪೂರ್ಣಗೊಂಡ ಕಾಮಗಾರಿಗಳಿಗೆ ಬಿಲ್ ಪಾವತಿಸಲು ನಗರಸಭೆ ಪೌರಾಯುಕ್ತರು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷ ಬಸವರಾಜ ಪೇಲನವರ ಆರೋಪಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿ ಪೂರ್ಣಗೊಂಡು 9 ತಿಂಗಳು ಕಳೆದರೂ ಗುತ್ತಿಗೆದಾರರಿಗೆ ನಗರಸಭೆ ಬಿಲ್ ಪಾವತಿಸಿಲ್ಲ. ಶಾಸಕರು ಕಾಮಗಾರಿ ಕಳಪೆಯಾಗಿವೆ. ಲೋಕಾಯುಕ್ತ ತನಿಖೆ ಮಾಡಿಸುತ್ತೇವೆ ಎನ್ನುತ್ತಿದ್ದು ಅದನ್ನು ತಾವು ಸ್ವಾಗತಿಸುತ್ತೇವೆ. ಯಾವ ತನಿಖೆಗೂ ತಾವು ಸಿದ್ಧರಾಗಿದ್ದೇವೆ. ಆದರೆ, ಸಮರ್ಪಕವಾಗಿ ಕಾಮಗಾರಿ ನಡೆಸಿದ್ದಕ್ಕೂ ಬಿಲ್ ಪಾವತಿಸದಿರುವುದು ಸರಿಯಲ್ಲ ಎಂದರು.
ಪೂರ್ಣಗೊಳಿಸಿರುವ ಎಲ್ಲ ಕಾಮಗಾರಿಗಳನ್ನು ಮೂರು ಹಂತದಲ್ಲಿ ಪರೀಕ್ಷೆ ಮಾಡಲಾಗಿದೆ. ನಾಲ್ಕನೇ ಹಂತದಲ್ಲಿ ಹಿಂದಿನ ಜಿಲ್ಲಾಧಿಕಾರಿಯವರು ಪರಿಶೀಲನೆ ಮಾಡಿ ಪ್ರಮಾಣಪತ್ರವನ್ನೂ ನೀಡಿದ್ದಾರೆ. ಹೀಗಿದ್ದರೂ ನಗರಸಭೆಯ ಕಾನೂನು ಗೊತ್ತಿಲ್ಲದ ಪೌರಾಯುಕ್ತರು ಬಿಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ.
ಕಾನೂನಾತ್ಮಕವಾಗಿ ಸರಿಯಾಗಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ಗಳನ್ನು ಪೌರಾಯುಕ್ತರು ಕೂಡಲೇ ಪಾವತಿಸುವಂತೆ ಸರ್ಕಾರ ಸೂಚನೆ ನೀಡಬೇಕು ಎಂದು ಅವರು ವಿನಂತಿಸಿದರು. ಗುತ್ತಿಗೆದಾರರಾದ ಪ್ರವೀಣ ಶೆಟ್ಟರ್, ಚಂದ್ರು ಕ್ಯಾತಣ್ಣವರ, ರಾಕೇಶ ಮುಂದಿನಮನಿ ಇತರರಿದ್ದರು.