ತಂತ್ರಾಂಶ ದೋಷ: ಆಸ್ತಿ ಮಾಲೀಕರಿಗೆ ಕಿರಿಕಿರಿ
ಬ್ಯಾಡಗಿ: ಸಾರ್ವಜನಿಕ ಆಸ್ತಿಗಳನ್ನು ಗಣಕೀಕೃತ ಮಾಡಲು ಮುಂದಾಗಿರುವ ಸ್ಥಳೀಯ ಪುರಸಭೆಯು ತಂತ್ರಾಂಶದಲ್ಲಾದ ದೋಷದಿಂದ ಸರಿಯಾಗಿದ್ದ ದಾಖಲೆಗಳನ್ನೇ ತಪ್ಪಾಗಿ ನಮೂದಿಸುವ ಮೂಲಕ ಹೊಸ ಅವಾಂತರ ಸೃಷ್ಟಿಸಿದ್ದು, ಇದರಿಂದ ಆಸ್ತಿ ಮಾಲೀಕರಿಗೆ ಅನಗತ್ಯ ಕಿರಿಕಿರಿ ಎನಿಸುತ್ತಿದೆ.
ಪೌರಾಡಳಿತ ಇಲಾಖೆಯು ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ತಿಗಳು, ರಸ್ತೆಗಳು, ದೇವಸ್ಥಾನ, ಕೆರೆ, ಬಾವಿ, ಉದ್ಯಾನ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಗುರುತಿಸಿ ಸುಮಾರು 7318 ಅಧೀಕೃತ ಹಾಗೂ 505 ಅನಧೀಕೃತ ಆಸ್ತಿಗಳನ್ನು ಗಣಕೀಕೃತಗೊಳಿಸಿದೆ.
ಇದಕ್ಕಾಗಿ ಕಳೆದೊಂದು ತಿಂಗಳಿಂದ ಸ್ಥಳೀಯ ಪುರಸಭೆ ಸಿಬ್ಬಂದಿ ಹಗಲಿರುಳೆನ್ನದೇ ಮನೆ ಮನೆಗೆ ತೆರಳಿ ಆಸ್ತಿ ಮಾಲೀಕರ ಹೆಸರು, ಅಳತೆ ಇತ್ಯಾದಿ ವಿವರಗಳಿರುವ ಸಿ ಫಾರಂನ್ನು (ಆಸ್ತಿವರ್ಣನೆ ಉತಾರ) ಮಾಲೀಕರ ಕೈಗೆ ಖುದ್ದಾಗಿ ತಲುಪಿಸಿದ್ದು, ಇದರಲ್ಲೇನಾದರೂ ಲೋಪದೋಷಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದೆ.
ಇದ್ದಿದ್ದೇ ಒಂದು ಕೊಟ್ಟಿದ್ದೇ ಇನ್ನೊಂದು: ಪುರಸಭೆ ಕೊಟ್ಟಿರುವ ಸಿ ಫಾರಂನ್ನು ಒಮ್ಮೆ ಕಣ್ಣಾಡಿಸಿದರೆ ಆಸ್ತಿ ಮಾಲೀಕರಿಗೆ ತಲೆಸುತ್ತು ಬರುವುದಂತೂ ಗ್ಯಾರಂಟಿ. ಬಹುತೇಕ ಸಿ ಫಾರಂಗಳಲ್ಲಿ ಮಾಲೀಕರ ಕಾಲಂನಲ್ಲಿ ಹೆಸರುಗಳೇ ನಾಪತ್ತೆಯಾಗಿದ್ದರೆ ಇನ್ನು ಕೆಲವುಗಳಲ್ಲಿ ಬೇರೆಯವರದ್ದೇ ಹೆಸರು ನಮೂದಾಗಿದೆ. ಮೂಲ ಅಳತೆಗೂ ಹೊಂದಾಣಿಕೆಯೇ ಇಲ್ಲ.
ಇನ್ನು ಫಾರಂನಲ್ಲಿ ಬಳಕೆಯಾಗಿರುವ ಕನ್ನಡ ಭಾಷೆ ದೇವರಿಗೆ ಪ್ರೀತಿ, ಕನ್ನಡ ಭಾಷೆಯನ್ನು ಇಲ್ಲಿ ಕಗ್ಗೊಲೆ ಮಾಡಲಾಗಿದೆ. ಹೆಸರಿನ ಕೊನೆಗೆ ವ್ಯಂಜನ ಗೋಚರವಾಗುತ್ತಿದ್ದು, ಉದಾಹರಣೆಗೆ ಗೌಡ ಬದಲಾಗಿ ಗೌಡಿ ಗೌಡ್ ಸುರೇಶ್ ರಮೇಶ್ ಗುಡ್ಡಪ್ ಹೀಗಿ ಪ್ರತಿಯೊಂದು ಫಾರಂನಲ್ಲೂ ಒಂದಿಲ್ಲೊಂದು ಲೋಪದೋಷಗಳಿವೆ.
ತಾಂತ್ರಿಕ ಸಿಬ್ಬಂದಿ ಬಳಸಿಲ್ಲ: ಆಸ್ತಿಗಳನ್ನು ಅಳತೆ ಮಾಡುವ ಸಂದರ್ಭ ಯಾವುದೇ ತಾಂತ್ರಿಕ ಅಧಿಕಾರಿಗಳನ್ನು ಬಳಸದಿರುವುದು ಅಳತೆಯಲ್ಲಾಗಿರುವ ದೋಷಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಬೇಕಾಬಿಟ್ಟಿಯಾಗಿ ನಡೆಸಿರುವ ಸರ್ವೇ ಕಾರ್ಯದಿಂದ ಪಟ್ಟಣದಲ್ಲಿ ಸಾಕಷ್ಟು ವಿವಾದಗಳನ್ನಂತೂ ಸೃಷ್ಟಿಸಿದೆ.
ಮಾಲೀಕರಿಗೆ ಅನಗತ್ಯ ಹೊರೆ: ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಮುಗಿಬಿದ್ದಿರುವ ಆಸ್ತಿ ಮಾಲೀಕರಿಗೆ, ಪುರಸಭೆ ಕೇವಲ 15 ದಿನದ ಗಡುವು ವಿಧಿಸಿದೆ. ಯಾವುದೇ ಆಕ್ಷೇಪಣೆ ಸಲ್ಲಿಸದಿದ್ದಲ್ಲಿ ಫಾರಂನಲ್ಲಿ ನಮೂದಾಗಿರುವ ಎಲ್ಲ ವಿವರ ಸರಿಯಾಗಿವೆ ಎಂಬ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದೆ.
ಇದರಿಂದ ಗಣಕೀಕೃತ ಪಹಣಿ ಮತ್ತು ಅಳತೆ ಸರಿಪಡಿಸಿಕೊಳ್ಳಲು ಭೂದಾಖಲೆಗಳ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿಗೆ ಮಾಲೀಕರು ಮುಗಿಬೀಳುತ್ತಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಲು ಏನಿಲ್ಲವೆಂದರೂ ಸರಾಸರಿ ರು. 150 ವ್ಯಯವಾಗುತ್ತಿದೆ.
ಏಜೆಂಟರ ಕರಾಮತ್ತು: ಇದೇ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಕೆಲವರು ಪುರಸಭೆಯಲ್ಲಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ನಿರಕ್ಷರಿ ಮಾಲೀಕರನ್ನು ಭೇಟಿಯಾಗುವ ಇವರು ಸಿ ಫಾರಂಗಳಲ್ಲಿನ ಲೋಪದೋಷ ಸರಿಪಡಿಸಿಕೊಡಲು ಬೇರೆ ಇಲಾಖೆಗಳಿಂದ ಕೆಲ ದಾಖಲೆಗಳನ್ನು ತೆಗೆಸಿಕೊಳ್ಳುವ ಸಬೂಬುಗಳನ್ನು ಮುಂದೊಡ್ಡಿ ಸುಮಾರು ರು. 500ರಿಂದ ರು. 1ಸಾವಿರವರೆಗೂ ವಸೂಲಿ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಕಂಪ್ಯೂಟರ್ ಎಂಬ ಪೆಡಂಭೂತದ ಕೈಗೆ ಸಿಕ್ಕಿರುವ ಬಹುತೇಕ ಇಲಾಖೆಗಳು ತಮ್ಮೆಲ್ಲ ದಾಖಲೆಗಳನ್ನು ಗಣಕೀಕೃತ ಯಂತ್ರದಲ್ಲಿ ಕ್ರೋಢೀಕರಿಸುವ ಮೂಲಕ ಸಾಧನೆಯ ಮೈಲಿಗಲ್ಲೊಂದನ್ನು ತಲುಪಿದ್ದೇವೆ ಎಂಬಂತೆ ಬೀಗುತ್ತಿವೆ. ಮಾನವ ಸಹಜ ತಪ್ಪುಗಳನ್ನು ಒಪ್ಪಿಕೊಳ್ಳಬಹುದಾದರೂ ಅಂತಹದ್ದೊಂದು ಪ್ರಯತ್ನಕ್ಕೆ ಮುಂದಾದ ಸ್ಥಳೀಯ ಪುರಸಭೆಯು ಎಲ್ಲ ಆಸ್ತಿ ಮಾಲೀಕರನ್ನು ಕಚೇರಿಗಳಿಗೆ ಅಲೆಯುವಂತೆ ಮಾಡಿರುವುದು ವಿಪರ್ಯಾಸ. ಇನ್ನಾದರೂ ತಪ್ಪನ್ನು ಸರಿಪಡಿಕೊಳ್ಳುವರೇ ಕಾದು ನೋಡಬೇಕಾಗಿದೆ.
- ಶಿವಾನಂದ ಮಲ್ಲನಗೌಡರ