ಭ್ರಷ್ಟಾಚಾರ ವಿರುದ್ಧ ರೈತರ ಸ್ವಾಭಿಮಾನ ಹೋರಾಟ
ಬ್ಯಾಡಗಿ: ಪ್ರಜಾಪ್ರಭುತ್ವ ವ್ಯವಸ್ಥೆ ಶುದ್ಧೀಕರಣಗೊಳಿಸುವ ಶಕ್ತಿ ರೈತನಿಗಿದೆ. ಆತನಿಗೆ ಅನ್ಯಾಯವೆಸಗುವ ಸರ್ಕಾರಕ್ಕೆ ಭವಿಷ್ಯವಿಲ್ಲ. ಕಳಪೆ ಬಿತ್ತನೆ ಬೀಜದಿಂದಾಗ ನಷ್ಟ ಪರಿಹಾರಕ್ಕಾಗಿ ಫೆ. 21ರಂದು ನಡೆಯುವ ಹೆದ್ದಾರಿ ಬಂದ್‌ನಿಂದ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ ಎಂದು ಹಸಿರುಸೇನೆ ಮುಖಂಡ ಗಂಗಣ್ಣ ಎಲಿ ಗುಡುಗಿದರು.
ತಾಲೂಕಿನ ಗುಂಡೇನಹಳ್ಳಿ ಗ್ರಾಮದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ನೂತನ ಗ್ರಾಮ ಘಟಕ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಭ್ರಷ್ಟಾಚಾರದ ವಿರುದ್ಧ ರೈತ ಸಂಘ ಸ್ವಾಭಿಮಾನದ ಹೋರಾಟ ಹಮ್ಮಿಕೊಂಡಿದೆ. ಇದಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧವಾಗಿದ್ದೇವೆ. ರೈತನ ಬಗ್ಗೆ ಕಿಂಚಿತ್ತೂ ಕಾಳಜಿ ತೋರದಿರುವ ಸರ್ಕಾರ ಯಾರ ಶ್ರಮದ ಹಣದಿಂದ ಆಡಳಿತ ನಡೆಯುತ್ತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ, ಆದರೆ ಇಂದಿಗೂ ಹೋರಾಟ ಮಾಡಿಯೇ ಪ್ರತಿಯೊಂದನ್ನು ಪಡೆದುಕೊಳ್ಳಬೇಕಾಗಿರುವುದು ರೈತರ ದುರ್ದೈವ. ಎರಡನೇ ಮಹಾಸಂಗ್ರಾಮಕ್ಕೆ ಸಜ್ಜಾಗಬೇಕಾಗಿದೆ ಎಂದರು. ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಜಾತಿ, ಧರ್ಮ ಆಧಾರದಲ್ಲಿ ಸರ್ಕಾರದ ಸೌಲಭ್ಯಗಳನ್ನು ಹಂಚಲಾಗುತ್ತಿದೆ. ದೇಶಕ್ಕೆ ಅನ್ನ ಹಾಕುವ ರೈತನಿಗೆ ಕಳಪೆ ಬೀಜ ಮಾರಾಟ ಮಾಡಿದ ಮಹಿಕೋ ಹಾಗೂ ಕಾವೇರಿ ಕಂಪನಿಗಳಿಗೆ ರಾಜಾಶ್ರಯ ನೀಡಲಾಗುತ್ತಿದೆ. ಪ್ರತಿ ಹೆಕ್ಟರ್‌ಗೆ ರು. 4,500 ಪರಿಹಾರ ನಿರ್ಧರಿಸಿದ್ದು ಯಾವ ಪುರುಷಾರ್ಥಕ್ಕೆ? ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ? ಎಂದರು. ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಹಸಿರು ಕ್ರಾಂತಿಯ ಪರಿಣಾಮ ದೇಶದಲ್ಲಿ ಹೈಬ್ರೀಡ್ ಬೀಜ ಹಾಗೂ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದನ್ನು ಪ್ರಾರಂಭಿಸಲಾಯಿತು. ಒಲ್ಲದ ಮನಸ್ಸಿನಿಂದಲೇ ರೈತರು ಅವುಗಳ ಬಳಕೆ ಮಾಡಿದ್ದು, ಅವೈಜ್ಞಾನಿಕ ಕೃಷಿನೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು. ನೂತನ ಗೌರವಾಧ್ಯಕ್ಷ ಮಲ್ಲೇಶಪ್ಪ ವೀರಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಬಸವರಾಜ ಸಂಕಣ್ಣನವರ, ಗೌರವ ಉಪಾಧ್ಯಕ್ಷ ಸುರೇಶ ಯತ್ನಳ್ಳಿ, ನೂತನ ಅಧ್ಯಕ್ಷ ಷಣ್ಮುಖಪ್ಪ ಹುರಕಡ್ಲಿ, ಉಪಾಧ್ಯಕ್ಷ ಶಿವಯೋಗಿ ಹುಣಸೀಕಟ್ಟಿ, ಕಾರ್ಯದರ್ಶಿ ಚನ್ನಬಸನಗೌಡ ಪಾಟೀಲ್, ನಾಗರಾಜ ಯತ್ನಳ್ಳಿ, ಕುಮಾರ ವರೂರ, ಅಶೋಕ ಶಿಗ್ಗಾಂವಿ, ಶಿವಾನಂದ ಇನ್ನಿತರರು ಉಪಸ್ಥಿತರಿದ್ದರು.
ಪ್ರತಿಭಟನೆಗೆ ಶಾಸಕ ಪುಟ್ಟಣ್ಣಯ್ಯ
ಬ್ಯಾಡಗಿ: ಮಹಿಕೋ ಮತ್ತು ಕಾವೇರಿ ಕಂಪನಿಯ ಕಳಪೆ ಹತ್ತಿ ಬೀಜದಿಂದಾದ ಹಾನಿಗೆ ಪರಿಹಾರಕ್ಕಾಗಿ ಫೆ. 21ರಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಮೋಟೆಬೆನ್ನೂರ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರಸ್ತೆ ತಡೆ ಪ್ರತಿಭಟನೆಯಲ್ಲಿ ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ಭಾಗವಹಿಸಲಿದ್ದಾರೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ರೈತ ಸಂಘದ ಅಧ್ಯಕ್ಷರಾಗಿ ಸಂಘಟನೆ ಮುಂಚೂಣಿಯಲ್ಲಿರುವ ಶಾಸಕ ಪುಟ್ಟಣ್ಣಯ್ಯ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಪರಿಹಾರ ಸಿಗುವವರೆಗೂ ಹೆದ್ದಾರಿಯನ್ನು ಬಿಟ್ಟು ಕದಲುವುದಿಲ್ಲ ಎಂದರು. ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. 3 ಡಿವೈಎಸ್‌ಪಿ, 10 ಸಿಪಿಐ, 24 ಪಿಎಸ್‌ಐ, 40 ಎಎಸ್‌ಐ ಸೇರಿದಂತೆ 220ಕ್ಕೂ ಹೆಚ್ಚು ಪೊಲೀಸ್‌ರನ್ನು ನಿಯೋಜಿಸಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 10 ತುಕಡಿಗಳು ಹಾಗೂ ಕೆಎಸ್‌ಆರ್‌ಪಿಯ ಎರಡು ಪಡೆಗಳು ಸೇರಿದಂತೆ 29 ಮಹಿಳಾ ಪೊಲೀಸ್‌ರನ್ನು ನಿಯೋಜಿಸಿರುವುದಾಗಿ ಪೊಲೀಸ್ ಮೂಲಗಳು ದೃಢಪಡಿಸಿವೆ.