ಮನೋವೈಕಲ್ಯ ಬೇಡ: ದಿಂಗಾಲೇಶ್ವರ ಸ್ವಾಮೀಜಿ
ಹಾನಗಲ್ಲ: ಮನುಷ್ಯ ಶಾಂತಿ ನೆಮ್ಮದಿಯ ಬದುಕಿಗಾಗಿ ಸಮುದಾಯದೊಂದಿಗೆ ಸುಖ-ದುಃಖ ಹಂಚಿಕೊಂಡು ಜೀವನ ನಡೆಸುವ ಸದ್ಬುದ್ಧಿ ಬರಬೇಕೆ ಹೊರತು ಮನೋ ವೈಕಲ್ಯಗಳನ್ನು ಮನದಲ್ಲಿಟ್ಟುಕೊಳ್ಳಬಾರದು ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳು ಕರೆ ನೀಡಿದರು.
ನಗರದಲ್ಲಿ ವಿರಕ್ತಮಠದ ಲಿಂ. ಕುಮಾರ ಶಿವಯೋಗಿಗಳವರ ಸ್ಮರಣೋತ್ಸವದ ಎರಡನೇ ದಿನದ ಧಾರ್ಮಿಕ ಗೋಷ್ಠಿಯ ಸಮ್ಮುಖವಹಿಸಿ ಮಾತನಾಡಿದ ಅವರು, ಹಾನಗಲ್ಲ ಕುಮಾರ ಮಹಾಸ್ವಾಮಿಗಳು ತ್ಯಾಗ, ಸಮಾಜ ಸೇವೆಯ ಮೂಲಕ ಇಡೀ ನಾಡಿಗೆ ಸಲ್ಲುವವರಾದರು. ಇತ್ತೀಚಿನ ದಿನಗಳಲ್ಲಿ ಪ್ರಚಾರಕ್ಕಾಗಿ ತಪಸ್ಸು ಮಾಡುವ ಡೋಂಗಿತನಗಳು ಹೆಚ್ಚಾಗಿವೆ. ಇದರ ಬದಲಾಗಿ ಸಮಾಜವನ್ನು ಕಣ್ಬಿಟ್ಟು ನೋಡಿ ಅಲ್ಲಿನ ಲೋಪದೋಷಗಳನ್ನು ತಿದ್ದುವ ಕಾರ್ಯ ಮಠ ಹಾಗೂ ಧರ್ಮ ಪೀಠಗಳಿಂದ ಆಗಬೆಕಾಗಿದೆ. ಪ್ರತಿ ಮನೆಗಳು ಸಂಸ್ಕಾರ ಕೇಂದ್ರಗಳಾಗಬೇಕು. ಮಠಗಳು ಇದಕ್ಕೆ ಮಾರ್ಗದರ್ಶನ ಮಾಡಬೇಕು. ಹಾನಗಲ್ಲ ಲಿಂ.ಕುಮಾರಶಿವಯೋಗಿಗಳು ಇಂತಹ ಮಾರ್ಗದರ್ಶಕರನ್ನು ಸಂಸ್ಕಾರಗೊಳಿಸಿ ಸಮಾಜದ ಉನ್ನತಿಗೆ ಶ್ರಮಿಸಿದ ಮಹಾತ್ಮರಾಗಿದ್ದಾರೆ ಎಂದರು. ಧರ್ಮ ವ್ಯಾಪಾರವಾಗುತ್ತಿದೆ. ಶಾಂತಿ ನೆಮ್ಮದಿ ಕದಡುವ ಧರ್ಮ ನಮಗ ಬೇಕಾಗಿಲ್ಲ. ಸದಾಚಾರ ಸದ್ವಿನಿಯೋಗವಾಗಬೇಕು. ಸಮಾನತೆಯನ್ನು ಬಿತ್ತಿ ಬೆಳೆಯಬೇಕು. ಅಜ್ಞಾನ ತೊಲಗಿ ಮಹಾಜ್ಞಾನ ಬರಬೇಕು. ಹಸಿದವನಿಗೆ ನೀಡಬೇಕು. ಸೇವೆಗೆ ಗೌರವ ಸಿಗಬೇಕು ಎಂದ ದಿಂಗಾಲೇಶ್ವರ ಶ್ರೀಗಳು ಶಾಂತಿ ನೆಮ್ಮದಿಯ ಜಾಗಗಳಲ್ಲಿ ಸಂತೋಷದಿಂದ ಬದುಕುವ ದಾರಿ ಕಂಡುಕೊಳ್ಳಿರಿ ಎಂದರು. ಹಾನಗಲ್ಲಿನ ದಿ. ಶಂಕ್ರಪ್ಪ ಹುಗ್ಗಿ ಅವರ ದತ್ತಿ ನಿಧಿಯಿಂದ ಸನ್ಮಾನ ಪಡೆದ ಹುಬ್ಬಳ್ಳಿಯ ಖ್ಯಾತ ದಂತವೈದ್ಯ ಡಾ. ಪ್ರಕಾಶ ತಾಂಡೂರ ಮಾತನಾಡಿ, ಹಾನಗಲ್ಲ ಲಿಂ. ಸದಾಶಿವಮಾಹಾಸ್ವಾಮಿಗಳು ಸಮಾಜದ ದಿವ್ಯ ಶಕ್ತಿಯಾಗಿದ್ದರು. ಹಾನಗಲ್ಲ ಕುಮಾರಮಹಾಸ್ವಾಮಿಗಳವರ ಆಶೋತ್ತರಗಳನ್ನು ಮುನ್ನಡೆಸಿಕೊಂಡು ಸಮಾಜಕ್ಕೆ ಒಳಿತು ಬಯಸಿದ ಮಹಾತ್ಮರಾಗಿದ್ದರು. ಅವರ ದರ್ಶನವೇ ಒಂದು ಭಾಗ್ಯವಾಗಿತ್ತು. ಶ್ರದ್ಧೆ, ಭಕ್ತಿಯಿಂದ ಮಹಾತ್ಮರನ್ನು ನೆನೆದು ಪೂಜಿಸಿದರೆ ಸತ್ಸಂಕಲ್ಪಗಳು ಈಡೇರುತ್ತವೆ. ಇಂತಹ ಶಕ್ತಿಕೇಂದ್ರ ಹಾನಗಲ್ಲ ಗುರು ವಿರಕ್ತಮಠವಾಗಿದೆ ಎಂದ ಅವರು, ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭ. ಆದರೆ, ಸಂಸ್ಥೆಯನ್ನು ಶ್ರದ್ಧೆಯಿಂದ ಬೆಳೆಸುವ ಸೂತ್ರದಾರ ಬಲು ಮುಖ್ಯ. ಇದಕ್ಕೆ ಶೈಕ್ಷಣಿಕ, ಧಾರ್ಮಿಕ ನಿಷ್ಠೆಯೂ ಬೇಕು ಎಂದರು. ಹುಬ್ಬಳ್ಳಿ ಮೂರು ಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳವರು ಸಾನ್ನಿಧ್ಯವಹಿಸಿದ್ದರು. ಇದೇ ಸಂದರ್ಭದಲ್ಲಿ ಹಾನಗಲ್ಲ ತಾಲೂಕಿನ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಹಾನಗಲ್ಲ ಪಟ್ಟಣದ 80 ವರ್ಷ ವಯೋವಾನ ದಾಟಿದ ಹಿರಿಯರನ್ನು ಶ್ರೀಗಳು ಗೌರವಿಸಿದರು. ಉಪನ್ಯಾಸಕ ಎಂ.ಬಿ. ನಾಯಕ ಕಾರ್ಯಕ್ರಮ ನಿರ್ವಹಿಸಿದರು.