ಕೀಟನಾಶಕ ಸಿಂಪರಿಸುವಾಗ ಜಾಗ್ರತೆ ವಹಿಸಿ: ಶಾಸಕ ಬಣಕಾರ ಸಲಹೆ
ಹಿರೇಕೆರೂರು: ಕೀಟನಾಶಕ ಸಿಂಪರಣೆ ಮಾಡಲು ಹಾಗೂ ಕೀಟ ನಾಶಕವನ್ನು ಸುರಕ್ಷಿತವಾಗಿ ಬಳಸುವ ವಿಧಾನಗಳ ಮಾಹಿತಿಯನ್ನು ಎಲ್ಲ ಕೃಷಿ ಪರಿಕರ ಮಾರಾಟಗಾರರು ಪಡೆದುಕೊಂಡು ರೈತರಿಗೂ ತಿಳಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕೃಷಿ ಪರಿಕರಗಳ ಮಾರಾಟಗಾರರಿಗೆ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೀಟನಾಶಕಗಳ ಬಳಕೆಯ ಬಗ್ಗೆ ಮೊದಲು ಮಾರಾಟಗಾರರು ಸಂಪೂರ್ಣವಾಗಿ ಮಾಹಿತಿ ಪಡೆದಿರಬೇಕು ಮತ್ತು ಕೀಟನಾಶಕಗಳನ್ನು ಯಥೇಚ್ಛವಾಗಿ ಬಳಸಬಾರದು ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರ ರೈತರಿಗೆ ಕೀಟನಾಶಕಗಳನ್ನು ಸಿಂಪರಿಸುವಾಗ ಬಳಸುವ ಕಿಟ್ ಗಳನ್ನು ರೈತರಿಗೆ ರಿಯಾಯತಿ ದರದಲ್ಲಿ ವಿತರಿಸಲು ಮುಂದಾಗಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಪಿ. ಸೇವಾನಾಯ್ಕ ಮಾತನಾಡಿ, ರೈತರು ಔಷಧಿ ಸಿಂಪರಣೆ ಮಾಡುವಾಗ ಮಾಸ್ಕ್ ಮತ್ತು ಕನ್ನಡಕ ಧರಿಸಬೇಕು ಹಾಗೂ ಕೈಗಳಿಗೆ ಪ್ಲಾಸ್ಟಿಕ್ ಹೊದಿಕೆ ಮತ್ತು ಸುರಕ್ಷಿತ ಬಟ್ಟೆ ಧರಿಸಬೇಕು. ದೇಹದ ಯಾವುದೇ ಭಾಗದಲ್ಲಿ ಗಾಯವಾದವರು ಕೀಟನಾಶಕ ಸಿಂಪರಣೆ ಮಾಡಬಾರದು ಎಂದು ತಿಳಿಸಿದರು. ರೈತರು ಪಡೆದ ಕೃಷಿ ಪರಿಕರಗಳ ಸಹಾಯಧನವನ್ನು ಇನ್ಮುಂದೆ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು. ಹನುಮನ ಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ತಜ್ಞ ಡಾ. ರಾಜಕುಮಾರ ಸುಧಾರಿತ ರೀತಿಯಲ್ಲಿ ಕೀಟನಾಶಕ ಸಿಂಪರಣೆ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು.