ಮಹನೀಯರ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ
ಶಿಗ್ಗಾಂವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಿಗ್ಗಾಂವಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಗರದ ಜನತೆಯ ಬಹುದಿನಗಳ ಬೇಡಿಕೆಯಾದ ವಿವಿಧ ಮಹನೀಯರ ಪುತ್ಥಳಿ ನಿರ್ಮಾಣ ಹಾಗೂ ಜಯಂತ್ಯುತ್ಸವಗಳನ್ನು ತಾಲೂಕು ಹಾಗೂ ಹೋಬಳಿ ಮಟ್ಟಗಳಲ್ಲಿಯೂ ಆಚರಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಲು ಚರ್ಚೆ ನಡೆಸಲಾಯಿತು.
ಕುರುಬ ಸಮಾಜದ ಮುಖಂಡ ಗದಿಗೆಪ್ಪ ಕೊಡ್ಲಿವಾಡ ಮಾತನಾಡಿ, ನಗರದಲ್ಲಿ ಸಂಗೊಳ್ಳಿ ರಾಯಣ್ಣರ ಪುತ್ಥಳಿ ನಿರ್ಮಾಣ, ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ರಚನೆ ಬಗ್ಗೆ ಸರ್ಕಾರ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಮರಾಠ ಸಮಾಜದ ಯುವಮುಖಂಡ ಮುತ್ತು ಕಟ್ಟಿಮನಿ ಮಾತನಾಡಿದರು. ಸಾಮಾಜಿಕ ಹೋರಾಟಗಾರ ಹರ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಮಣ್ಣಣ್ಣವರ ಮಾತನಾಡಿ, ವೀರ ಮಹನೀಯರ ಹೆಸರಲ್ಲಿ ಜರುಗುವ ಯಾವುದೇ ಕಾರ್ಯಕ್ರಮಗಳು ಕಾಟಾಚಾರದ ಆಚರಣೆಯಾಗಬಾರದು ಹಾಗೂ ಶಿಗ್ಗಾಂವಿ ನಗರದಲ್ಲಿ ವಿವಿಧ ಮಹನೀಯರ ಪುತ್ಥಳಿ ನಿರ್ಮಾಣದ ಬಗ್ಗೆ 2011ರಲ್ಲಿ ಪುರಸಭೆ ಠರಾವು ಮಾಡಿದ್ದು, ಈವರೆಗೂ ಪುತ್ಥಳಿ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪುತ್ಥಳಿ ನಿರ್ಮಾಣದ ಬಗ್ಗೆ ಸ್ಥಳೀಯ ಶಾಸಕ ಹಾಗೂ ವಿ.ಪ ಸದಸ್ಯರು ಕೊಟ್ಟ ಭರವಸೆ ಭರವಸೆಯಾಗಿಯೇ ಉಳಿದಿದ್ದು, ಇದು ಸಾರ್ವಜನಿಕರ ಹಾಗೂ ಹೋರಾಟಗಾರರ ಬೇಸರಕ್ಕೆ ಕಾರಣವಾಗಿದೆ. ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.