ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶೀಘ್ರ ನ್ಯಾಯ ದೊರಕಿಸಲು ವಕೀಲರು ಶ್ರಮಿಸಿ

Vishwanath S
Updated On : 23 Feb 2014, 12:38 pm

ಹಾವೇರಿ: ನ್ಯಾಯಾಲಯದ ಮೇಲಿನ ಒತ್ತಡ ಕಡಿಮೆ ಮಾಡಲು ಲೋಕಅದಾಲತ್, ಮಧ್ಯಸ್ಥಿಕೆ ಕೇಂದ್ರ, ರಾಜಿ ಪಂಚಾಯ್ತಿಯಂಥ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲಾಗಿದ್ದು, ಜನರಿಗೆ ಶೀಘ್ರ ನ್ಯಾಯ ದೊರಕಿಸಿಕೊಡಲು ವಕೀಲರು ಶ್ರಮಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷರಾದ ಕೆ.ಎಲ್. ಮಂಜುನಾಥ ಕರೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಿರ್ಮಿಸಿರುವ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ನ್ಯಾಯವಾದಿಗಳು ಕಕ್ಷಿದಾರರ ಬವಣೆ ಅರ್ಥ ಮಾಡಿಕೊಂಡು ಅವರಿಗೆ ಶೀಘ್ರ ನ್ಯಾಯ ದೊರಕಿಸುವ ದಿಸೆಯಲ್ಲಿ ಸ್ಪಂದಿಸಬೇಕು. ರಾಜಿ ಸಂಧಾನ ಮಾಡಿದರೆ ಪ್ರಕರಣಗಳು ಮುಗಿದು ನ್ಯಾಯವಾದಿಗಳು ಏನು ಮಾಡಬೇಕು ಎಂಬ ಭಯ ಬೇಡ. ನ್ಯಾಯವಾದಿಗಳು ಹಳ್ಳಿಗೆ ಹೋಗಿ ಲೋಕ ಅದಾಲತ್ ಮೂಲಕ ನ್ಯಾಯ ಬಗೆಹರಿಸಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಬೇಕು. ಇದರಿಂದ ಪ್ರಕರಣಗಳು ಅತಿ ಕಡಿಮೆ ಖರ್ಚಿನಲ್ಲಿ ಬೇಗ ಇತ್ಯರ್ಥಗೊಳ್ಳುವುದರಿಂದ ಅದಕ್ಕೆ ಪ್ರೇರಣೆ ನೀಡಿದ ನ್ಯಾಯವಾದಿಗಳ ಖ್ಯಾತಿ ಸಮಾಜದಲ್ಲಿ ಹೆಚ್ಚಾಗುತ್ತದೆ. ಜತೆಗೆ ಹೆಚ್ಚು ಪ್ರಕರಣಗಳು ಅವರ ಬಳಿಯೇ ಹುಡುಕಿಕೊಂಡು ಬರುತ್ತವೆ ಎಂದರು.
ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರದಲ್ಲಿ ನ್ಯಾಯವಾದಿಗಳ ಪಾತ್ರ ಪ್ರಮುಖವಾಗಿದೆ. ಇಲ್ಲಿ ಮಧ್ಯಸ್ಥಿಕೆದಾರ ನ್ಯಾಯವಾದಿಗಳು ಕಕ್ಷಿದಾರರನ್ನು ಸಂಧಾನ ಪ್ರಕ್ರಿಯೆಗೆ ಪ್ರೇರಣೆ ನೀಡುತ್ತಾರೆ. ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಕಕ್ಷಿದಾರರು ತಮ್ಮ ಪ್ರಕರಣವನ್ನು ತಾವೇ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದ್ದು, ಇದರಲ್ಲಿ ಯಾರೊಬ್ಬರೂ ಸೋಲುವುದಿಲ್ಲ ಹಾಗೂ ಗೆಲ್ಲುವುದೂ ಇಲ್ಲ. ಇಬ್ಬರ ಒಪ್ಪಿಗೆ ಮೇರೆಗೆ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳ್ಳುತ್ತದೆ ಎಂದರು. ಹೈಕೋರ್ಟ್ ನ್ಯಾಯಾಧೀಶರಾದ ಅರವಿಂದಕುಮಾರ ಮಾತನಾಡಿ, ಇಂದು ನ್ಯಾಯಾಲಯಗಳಲ್ಲಿ ಪ್ರಕರಣಗಳ ಒತ್ತಡ ಹೆಚ್ಚಾಗಿದೆ. ನ್ಯಾಯ ಖರ್ಚುದಾಯಕ ಹಾಗೂ ವಿಳಂಬ ಆಗುತ್ತಿರುವುದರಿಂದ ಜನರು ಅನ್ಯ ಮಾರ್ಗ ಹಿಡಿಯುವ ಮೊದಲು ಸಾಂವಿಧಾನಿಕ ವ್ಯವಸ್ಥೆಯಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿದೆ. ಇದಕ್ಕೆ ಜನತಾ ನ್ಯಾಯಾಲಯ, ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರ ಸಹಕಾರಿಯಾಗಿವೆ ಎಂದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ. ಪಾಟೀಲ್, ಮಧ್ಯಸ್ಥಿಕೆ ಕೇಂದ್ರದ ಮೂಲಕ ಪ್ರಕರಣ ಇತ್ಯರ್ಥಗೊಳಿಸುವ ವಿಚಾರದಲ್ಲಿ ನ್ಯಾಯವಾದಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು.
ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಡಾ. ಜವಾದ್ ರಹೀಮ್ ಮಾತನಾಡಿ, ಕಾನೂನಿನ ನೆರವು ಸಮಾಜದ ಕಡೆಯ ವ್ಯಕ್ತಿಗೆ ತಲುಪಬೇಕಾಗಿದೆ. ಅದನ್ನು ಮುಟ್ಟಿಸಲು ವಕೀಲರ ನೆರವು ಅಗತ್ಯ. ಜನರಿಗೆ ಶೀಘ್ರ ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದರು.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಆನಂದ ಬೈರಾರಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ ನಿಜಗಣ್ಣವರ, ಸಂಸದ ಶಿವಕುಮಾರ ಉದಾಸಿ. ಶಾಸಕ ರುದ್ರಪ್ಪ ಲಮಾಣಿ, ಬೆಂಗಳೂರ ಮಧ್ಯಸ್ಥಿಕಾ ಕೇಂದ್ರದ ನಿರ್ದೇಶಕ ನ್ಯಾ. ವಿಶ್ವನಾಥ ಅಂಗಡಿ ಮಾತನಾಡಿದರು. ಜಿಲ್ಲಾ ನ್ಯಾಯಾಧೀಶೆ ಎಸ್. ಸಾವಿತ್ರಿ ವಿನಾಯಕ ಸ್ವಾಗತಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಚನ್ನಕೇಶವರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ನ್ಯಾಯವಾದಿ ಎಸ್.ಎ. ಹುದ್ದಾರ ವಂದಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಸ್.ಹಿರೇತನದ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement