ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಕ್ಕಳ ಮುನ್ನಡೆಸುವ ಜವಾಬ್ದಾರಿ ಮಹಿಳೆಯರದ್ದು

Vishwanath S
Updated On : 24 Feb 2014, 11:17 am

ಹಾನಗಲ್ಲ: ಸ್ತ್ರೀಶಕ್ತಿ ಜಾಗ್ರತವಾಗಿ ಸುಸಂಸ್ಕೃತ ವೇಷ ಭೂಷಣ, ಮಾತುಕತೆ, ಮನಸ್ಸು ಹೊಂದಿರಬೇಕು, ಮೊಬೈಲ್ ಕಾಲದಲ್ಲಿ ಎಲ್ಲವೂ ದಿವಾಳಿಯಾಗುತ್ತಿರುವುದನ್ನು ಗಮನಿಸಿ ಮಕ್ಕಳನ್ನು ಸರಿದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಮಹಿಳೆಯರೇ ಹೊರಬೇಕು ಎಂದು ಬಾಗಲಕೋಟೆಯ 80 ವರ್ಷದ ಅಜ್ಜಿ, ಜಾನಪದ ಕಲಾವಿದೆ ಗುರಮ್ಮ ಸಂಕಿನ ಕಿವಿಮಾತು ಹೇಳಿದರು.
ಹಾನಗಲ್ಲಿನಲ್ಲಿ ಲಿಂ.ಕುಮಾರ ಸ್ವಾಮಿಗಳವರ 84ನೇ ಪುಣ್ಯ ಸ್ಮರಣೋತ್ಸವದ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಾತುಗಳನ್ನಾಡಲು ಆರಂಭಿಸುತ್ತಿದ್ದಂತೆ ಇಡೀ ಸಭೆ ಶಾಂತಚಿತ್ತವಾಗಿ ಅಜ್ಜಿಯ ಸುಮಧುರ ಜಾನಪದದ ಹಾಡು ಬೆರೆತ ಮೌಲ್ಯಯುತ ಮಾತುಗಳು ಸಭಾಸದರಿಂದ ಭಾರಿ ಚಪ್ಪಾಳೆ ಗಿಟ್ಟಿಸಿದವು.
80ರ ವಯೋವಾನದಲ್ಲಿಯೂ ಕುಂದದ ಅವರ ಸಿರಿಕಂಠದ ಎತ್ತರದ ಧ್ವನಿಯ ಹಾಡುಗಳು ಸಭಾಸದರಲ್ಲಿ ಶಾಶ್ವತವಾಗಿ ಉಳಿಯುವಂತಾಗಿದ್ದವು.
ಭ್ರೂಣ ಹತ್ಯೆ ಮಾಡಬ್ಯಾಡ್ರಿ, ಹೆಣ್ಣನ್ನು ಹಿಂಸಿಸಿ ಕೊಲ್ಲಬ್ಯಾಡ್ರಿ, ವರದಕ್ಷಿಣಿ ಪಿಡುಗು ಹೆಣ್ಣಿಗಂಟಿ ಆತ್ಮಹತ್ಯೆಯ ದಾರಿ ಹಿಡಿದೈತಿ, ಆದ್ರ ಒಳ್ಳೆ ಗಂಡಂದಿರೂ ಇದ್ದಾರ, ಅಂಥ ಗಂಡಂದಿರನ್ನ ನಿಜ ದೇವರೆಂದು ಪೂಜೆ ಮಾಡ್ರಿ. ಹೆಣ್ಣು ಈ ನಾಡಿನ ಕಣ್ಣು. ಅದಕ್ಕ ಹುಣ್ಣು ಆಗದಂತ ನೋಡಿಕೊಳ್ರಿ. ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಕಲಿಸಿರಿ. ತಾಯಂದಿರು ನಿಮ್ಮ ವೇಷ ಭೂಷಣ ನಮ್ಮ ಸಂಸ್ಕೃತಿಯನ್ನ ಬಿಡಬಾರದು. ನೀವೇ ಸಂಸ್ಕೃತಿ ಬಿಟ್ರ ಮಕ್ಕಳಿಗೇನು ಕಲಸತೀರಿ, ಯವ್ವ ನೀವು ಈ ನಾಡನ್ನ ಕಾಪಾಡೋರು, ಒಳ್ಳೆ ಬುದ್ದಿ ಇಟಗೊಂಡು ಜೀವನ ಮಾಡ್ರಿ ಎಂದು ಬುದ್ಧಿ ಹೇಳಿದಳು. ವೇದಿಕೆಯಲ್ಲಿದ್ದ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಕಪ್ಪೋತಗಿರಿ ಶಿವಕುಮಾರ ಮಹಾಸ್ವಾಮಿಗಳು, ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವ ಮಹಾಸ್ವಾಮಿಗಳವರು, ಮಾಜಿ ಸಜಿವ ಸಿ. ಎಂ. ಉದಾಸಿ ಗುರಮ್ಮನ ಮಾತುಗಳನ್ನು ಚಕಿತರಾಗಿ ಆಲಿಸುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement