ಸರ್ಕಾರಿ ಯೋಜನೆ ಸದುಪಯೋಗವಾಗಲಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಫೆ. 23
ಸಂವಿಧಾನವು ಕೆಳವರ್ಗದ ಜನತೆಗೆ ಹಲವಾರು ಜನಪರ ಯೋಜನೆಗಳನ್ನು ರೂಪಿಸಿದ್ದರೂ ಸಹ ಅವುಗಳು ನಿಜವಾದ ಫಲಾನುಭವಿಗಳಿಗೆ ತಲುಪಿಲ್ಲ. ಇದಕ್ಕೆ ಅವರಿಗೆ ಯೋಜನೆಗಳು ಸರಿಯಾದ ಮಾಹಿತಿ ದೊರಕದೆ ಇರುವುದು ಕಾರಣ. ತಾಂಡಾಗಳಲ್ಲಿ ವಾಸಿಸುವ ಜನತೆ ಮೊದಲು ಸಾಕ್ಷರರಾಗಬೇಕು. ಆ ಮೂಲಕ ಯೋಜನೆಗಳ ಸರಿಯಾದ ಮಾಹಿತಿ ಪಡೆದುಕೊಂಡು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಕರೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಬೆಂಗಳೂರು ಮತ್ತು ಆಲ್ ಇಂಡಿಯಾ ಬಂಜಾರ ಸೇವಾಸಂಘ ತಾಲೂಕು ಘಟಕ ಹಿರೇಕೆರೂರು ಆಶ್ರಯದಲ್ಲಿ ಜರುಗಿದ ತಾಂಡಾದ ನಿವಾಸಿಗಳಿಗೆ ಅರಿವು ಹಾಗೂ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ತಾಂಡಾಗಳು ಅಭಿವೃದ್ಧಿಯಾಗಲು ಅಲ್ಲಿರುವ ಜನರಿಗೆ ಸರ್ಕಾರ ತಮಗಾಗಿ ಜಾರಿಗೆ ತಂದ ಯೋಜನೆಗಳ ಬಗ್ಗೆ ತಿಳಿವಳಿಕೆ ಮತ್ತು ಅವುಗಳನ್ನು ತಾವು ಹೇಗೆ ಪಡೆದುಕೊಳ್ಳಬೇಕು ಎಂಬುದರ ಪರಿಜ್ಞಾನವಿಲ್ಲದ ಕಾರಣ ತಾಂಡಾಗಳು ಅಭಿವೃದ್ಧಿ ಕಂಡಿಲ್ಲ. ಈ ಕುರಿತು ಸಾಕ್ಷರರು ಮತ್ತು ಜನಪ್ರತಿನಿಧಿಗಳು ಯೋಜನೆಗಳ ಸಾಫಲ್ಯದ ಬಗ್ಗೆ ಸೂಕ್ತ ತಿಳಿವಳಿಕೆ ನೀಡಬೇಕು. ಇದಕ್ಕೆ ತಾಲೂಕಿನಲ್ಲಿ ಲಂಬಾಣಿ ನೌಕರರ ಸಂಘ ಪೂರಕವಾಗಿ ಕೆಲಸ ಮಾಡುತ್ತಿರುವುದು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಹಕಾರಿಯಾಗಿದೆ ಎಂದರು.
ಶಾಸಕರ ಅನುದಾನದಡಿ ರು. 10 ಲಕ್ಷ ಮೊತ್ತದಲ್ಲಿ ಚನ್ನಳ್ಳಿ, ವರಹ, ನಿಡನೇಗಿಲ ಮೊದಲಾದೆಡೆ ತಾಂಡಾಗಳಲ್ಲಿ ಸಮುದಾಯ ಭವನ ನಿರ್ಮಿಸಲು ಈಗಾಗಲೇ ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.
ಅತಿಥಿಗಳಾಗಿ ತಹಸೀಲ್ದಾರ್ ಶಕುಂತಲಾ ಚೌಗಲಾ ಮಾತನಾಡಿ, ಲಂಬಾಣಿ ಜನತೆಗೆ ತಮಗಾಗಿ ಬಂದ ಯೋಜನೆಗಳ ಬಗ್ಗೆ ಸೂಕ್ತ ಜ್ಞಾನ ಹೊಂದಲು ಎಲ್ಲರೂ ಸಾಕ್ಷರರಗಬೇಕು. ಈ ಮೂಲಕ ಸಮಾಜ ಮುಖ್ಯ ವಾಹಿನಿಗೆ ತರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಈ ನಿಟ್ಟಿನಲ್ಲಿ ತಾಲೂಕಿನ ಲಂಬಾಣಿ ತಾಂಡಾಗಳಲ್ಲಿ 250ಕ್ಕಿಂತ ಹೆಚ್ಚು ಜನರಿದ್ದು, 50 ಮನೆಗಳನ್ನು ಹೊಂದಿದ್ದರೆ ಅಂಥ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಈಗಾಗಲೇ ಸರ್ಕಾರ ಆದೇಶ ನೀಡಿದೆ. ಇದೀಗ ತಾವು ತಾಂಡಾಗಳ ಸಮಗ್ರ ಮಾಹಿತಿ ಪೂರೈಸುವಂತೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸಮಾಜ ಮುಖ್ಯ ವಾಹಿನಿಗೆ ಬರಬೇಕಾದರೆ ಸರ್ಕಾರದ ಯೋಜನೆಗಳನ್ನು ಪಡೆಯಬೇಕಾದರೆ ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ಪಡೆಯಲು ಸಾಧ್ಯವಿದೆ ಎಂದರು.
ಅತಿಥಿಗಳಾಗಿ ನಿವೃತ್ತ ಜಿಲ್ಲಾಧಿಕಾರಿ ಪೂಮ್ಯಾನಾಯ್ಕ, ನಿವೃತ್ತ ತಹಸೀಲ್ದಾರ್ ಉಮಾಶಂಕರ, ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ಗಿಡಿಯಣ್ಣನವರ, ಚಂದ್ರು ಅಣ್ಣಪ್ಪನವರ, ಆರ್.ಕೆ. ಲಮಾಣಿ, ಸಂಪನ್ಮೂಲ ವ್ಯಕ್ತಿ ಮಲ್ಲೇಶನಾಯ್ಕ, ಟಿ.ಆರ್. ಲಮಾಣಿ, ಕೆ.ಆರ್. ಲಮಾಣಿ, ಮಹೇಶ ಲಮಾಣಿ ತಾಪಂ ಕಾರ್ಯನಿರ್ವಾಹಕಾಧಿಕಾರಿ ಡಿ.ಎಂ. ಜನವಾಡ ಮೊದಲಾದವರು ಉಪಸ್ಥಿತರಿದ್ದರು.