ಅನರ್ಹರಿಗೆ ನಿವೇಶನ: ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 24
ತಾಲೂಕಿನ ಆಲದಕಟ್ಟಿ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಉಚಿತವಾಗಿ ನಿವೇಶನ ರಹಿತ ಕುಟುಂಬಗಳಿಗೆ ನೀಡುವಂತೆ ಆದೇಶವಿದ್ದರೂ ಅನರ್ಹ ಫಲಾನುಭವಿಗಳನ್ನು ಕಾನೂನು ಬಾಹಿರವಾಗಿ ಅಲ್ಲಿನ ಗ್ರಾಪಂ ಆಡಳಿತ ಮಂಡಳಿ ಆಯ್ಕೆ ಮಾಡಿದೆ ಎಂದು ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ದಾಖಲೆಗಳೊಂದಿಗೆ ಅವರು ಮಾಹಿತಿ ನೀಡಿದರು.
ಅನರ್ಹರಿಗೆ ನಿವೇಶನ ಹಂಚಿಕೆ: 2003ರಲ್ಲಿ ಸರ್ಕಾರ 1 ಎಕರೆ 37 ಗುಂಟೆ ಜಮೀನನ್ನು ಖರೀದಿಸಿ ವಸತಿ ರಹಿತ 77 ಬಡ ಕುಟುಂಬಗಳಿಗೆ ಉಚಿತವಾಗಿ ನಿವೇಶನ ನೀಡಲು ಸೂಚಿಸಿತ್ತು. ಆದರೆ, ಗ್ರಾಪಂ ಆಡಳಿತ ಮಂಡಳಿ ಅನರ್ಹ ಫಲಾನುಭವಿಗಳಿಂದ ಹಣದ ಆಮಿಷಕ್ಕೊಳಗಾಗಿ ಅರ್ಹ ಫಲಾನುಭವಿಗಳ ಆಯ್ಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸದೇ ಗ್ರಾಮಸಭೆಯನ್ನೂ ಕರೆಯದೇ ಆರ್ಥಿಕವಾಗಿ ಸಬಲರಾಗಿರುವವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಆಯ್ಕೆ ಮಾಡಿರುವ 77 ಜನ ಫಲಾನುಭವಿಗಳ ಪೈಕಿ 45 ಫಲಾನುಭವಿಗಳು ಬಹುತೇಕರು ಒಂದೇ ಕುಟುಂಬದವರಾಗಿದ್ದಾರೆ. ಟ್ರ್ಯಾಕ್ಟರ್, ಬೈಕ್, ಸ್ವಂತ ಆರ್ಸಿಸಿ ಮನೆ, ಬಾಡಿಗೆಗೆ ಮನೆಗಳನ್ನು ನೀಡಿದ್ದಾರೆ. ಕೆಲವರು ಈಗಾಗಲೇ ವಸತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ನೌಕರರಾಗಿದ್ದಾರೆ. ಸ್ಥಳೀಯರಲ್ಲದವರಿದ್ದಾರೆ ಎಂದು ಆರೋಪಿಸಿ ಈ ಕುರಿತು ಅವರು ದಾಖಲೆ ಪ್ರದರ್ಶಿಸಿದರು.
ಆರ್ಥಿಕವಾಗಿ ಸಬಲರಾಗಿರುವವರಿಗೆ ನಿವೇಶನ ಹಂಚಿಕೆ ವಿಷಯ ತಿಳಿದ ಗ್ರಾಮಸ್ಥರು ಕಳೆದ ಜ. 4ರಂದು ಅನರ್ಹ ಫಲಾನುಭವಿಗಳ ಆಸ್ತಿ ವಿವರಗಳೊಂದಿಗೆ ಜಿಪಂ ಸಿಇಒ, ಜಿಲ್ಲಾಧಿಕಾರಿಗಳು, ತಾಪಂ ಇಒ ಹಾಗೂ ಜಿಲ್ಲೆಯ ಸಚಿವರು, ಶಾಸಕರಿಗೆ ಅನರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡದಂತೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಅನರ್ಹ ಫಲಾನುಭವಿಗಳ ಪಟ್ಟಿ ರದ್ದುಗೊಳಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸುರೇಶಗೌಡ ಪಾಟೀಲ ಎಚ್ಚರಿಕೆ ನೀಡಿದರು.
ವೀರೇಶ ಮತ್ತಿಹಳ್ಳಿ, ವೀರಪ್ಪ ಸವಣೂರ, ವಿಜಯಗೌಡ ಪಾಟೀಲ, ಪರಸಪ್ಪ ದುರಗಣ್ಣನವರ, ಮಲ್ಲೇಶಪ್ಪ ಹಿರೇಗೌಡ್ರ, ದಾನೇಶಪ್ಪ ಕೆಂಗೊಂಡ, ಪ್ರಕಾಶಗೌಡ ಪಾಟೀಲ, ಬರಮಗೌಡ ಮುದಿಗೌಡ್ರ, ಹನುಮೇಶ ಬೈಲನಾಯಕರ, ನಿಜಪ್ಪ ಕೋರಿಶೆಟ್ಟರ್, ಸಿದ್ದಲಿಂಗಪ್ಪ ಸೊಟಾರಿ, ನಂದೆಪ್ಪ ಲಮಾಣಿ ಇತರರು ಇದ್ದರು.