ಸರ್ಕಾರಿ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ: ಪ್ರಭು
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ. 24
ಕರ್ನಾಟಕ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಅದರ ಸದುಪಯೋಗವನ್ನು ಜನಸಾಮಾನ್ಯರು ಸರಿಯಾದ ರೀತಿಯಲ್ಲಿ ಬಳಕೆಮಾಡಿಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿದ್ದು, ಪಾಲಕರು ಸರಿಯಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಹೇಳಿದರು.
ತಾಲೂಕಿನ ಅರಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಗ್ರಾಮದ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿ ಮಾತನಾಡಿದರು. ಆರಳೇಶ್ವರ ಗ್ರಾಮದಲ್ಲಿ ಸಂಚರಿಸಿ ಶಾಲೆಗೆ ಸೇರಿಸಿದ ನಂತರ ಶಾಲೆ ಬಿಟ್ಟ ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಪಾಲಕರ ಮನವೊಲಿಸಿ ಅರಳೇಶ್ವರ ಕ್ಲಸ್ಟರ್ನ ಸುಮಾರು 7-8 ಮಕ್ಕಳು ಮತ್ತೆ ಶಾಲೆಗೆ ತರುವಲ್ಲಿ ಯಶಸ್ವಿಯಾದರು. ಪಾಲಕರು ಸಹ ಇನ್ನು ಮುಂದೆ ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ ಅವರಿಗೆ ಭರವಸೆ ನೀಡಿದರು. ಜಿ.ಜಿ. ಗೊರನವರ, ಸಂಪನ್ಮೂಲ ವ್ಯಕ್ತಿ ಪಿ.ಎಂ. ಚಲವಾದಿ, ಗ್ರಾಮದ ಮುಖಂಡರಾದ ರುದ್ರಪ್ಪ ತವರಿ, ಎಸ್ಡಿಎಂಸಿ ಸದಸ್ಯ ವಿರೂಪಾಕ್ಷಪ್ಪ ಜಾವೋಜಿ, ಎ.ಆರ್. ಪ್ರಾಣೇಶರಾವ್, ತಾಲೂಕು ಸಾಕ್ಷರ ಸಂಯೋಜಕ ಟಿ.ಎಚ್. ಗೆಜ್ಜಿಹಳ್ಳಿ ಟಿ. ಶಿವಕುಮಾರ, ಆನಂದ ಹೆಗಡೆ, ಚಂದ್ರಶೇಖರ್ ಇದ್ದರು.
ಜಾನಪದ ಸಾಹಿತ್ಯ, ಕಲೆಯಿಂದ ನಾಡು ಶ್ರೀಮಂತ: ಹಾಲೇಶ
ಶಿಗ್ಗಾಂವಿ: ಭಾರತ ದೇಶ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿದೆ. ಅರಸು ಮನೆತನಗಳು ಸಹ ಪ್ರಾಚೀನ ಕಾಲದಿಂದ ಲಲಿತ ಕಲೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿವೆ. ಅನಿವಾರ್ಯತೆ ಮಧ್ಯ ಬೆಳೆದ ಜಾನಪದ ಸಾಹಿತ್ಯ ಮತ್ತು ಕಲೆ ಈ ನಾಡನ್ನು ಶ್ರೀಮಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಜಾನಪದ ಕಲಾವಿದ ಹಾಲೇಶ ಗುಂಗೇರಿ ಹೇಳಿದರು.
ಪಟ್ಟಣದ ಎಸ್ಆರ್ಜೆವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಜಾನಪದ ಪರಂಪರೆ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿ ಜಾನಪದ ಗೀತೆಗಳನ್ನು ಹಾಡಿದರು.
ಅವರೊಂದಿಗೆ ಬಸವರಾಜ ಕರಡಿ ಸಾಥ್ ನೀಡಿದರು. ಜಾನಪದ ಕಲಾವಿದೆ ಸಾವಕ್ಕಾ ಓಲೀಕಾರ, ಭಾರತಿ ಛಬ್ಬಿ ಸೋಬಾನೆ ಪದಗಳನ್ನು ಹಾಡಿದರು.
ತಾಲೂಕು ಪರಂಪರಾ ಕೂಟದ ಸಂಚಾಲಕ ಪ್ರೊ. ಪಿ.ಸಿ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಸಿ.ಎಚ್. ತಾವರಗೊಂದಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಡಾ. ಡಿ.ಎ. ಗೊಬ್ಬರಗುಂಪಿ, ಡಾ. ಬಿ.ಎಸ್. ನರೇಗಲ್ ಉಪಸ್ಥಿತರಿದ್ದರು.