ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದಾನ ದಯಾ ಪ್ರಚೋದಕವಾದರೆ ಆತ್ಮಕ್ಕೆ ಶಾಂತಿ

Vishwanath S
Updated On : 26 Feb 2014, 11:16 am

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 25
ಗಳಿಕೆಯ ಒಂದು ಭಾಗ ಧರ್ಮ ಕಾರ್ಯಕ್ಕೆ ಮೀಸಲಾಗಿರಬೇಕು. ದಾನ ಕೇವಲ ವೃತ್ತಿ ಪೋಷಕವಾಗದೇ ದಯಾ ಪ್ರಚೋದಕವಾದರೆ ಲೋಕಕ್ಕೆ ಕ್ಷೇಮ. ಆತ್ಮಕ್ಕೂ ಶಾಂತಿ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಅಗಡಿ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಿಯ ಮಂದಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಆಸ್ತಿಕರೂ ಇದ್ದಾರೆ, ನಾಸ್ತಿಕರೂ ಇದ್ದಾರೆ, ನಂಬಿಕೆ ವಿಶ್ವಾಸ ಮುಖ್ಯ. ಧರ್ಮ ಜಾಗೃತವಾಗಿರಲು ಮಠ, ಮಂದಿರಗಳು ಅಗತ್ಯ ಎಂದು ಶಿವಣ್ಣನವರ ಹೇಳಿದರು. ನಾಲ್ಮಡಿ ಜಗದ್ಗುರು ನೀಲಕಂಠ ಪಟ್ಟದಾರೈ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ಗಾಳಿ, ಬೆಳಕು, ನೀರು ಏನೆಲ್ಲ ಪ್ರತಿಫಲಾಪೇಕ್ಷೆಯಿಲ್ಲದೇ ಕೊಡುತ್ತದೆ. ಆದರೆ, ಮನುಷ್ಯ ಮಾತ್ರ ಸ್ವಾರ್ಥ, ಸಂಕುಚಿತತೆಯಿಂದ ಕೂಡಿದ್ದಾನೆ. ಧರ್ಮ ಮಾರ್ಗದಿಂದ ನಡೆಯುವುದು ಹಾಗೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಜನರು ಮುಂದಾಗಬೇಕು ಎಂದು ನುಡಿದರು. ಪ್ರಭುಸ್ವಾಮಿ ಮಠದ ಗುರುಸಿದ್ಧ ದೇವರು ಮಾತನಾಡಿ, ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸನಾತನ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ. ದೇವರು ಧರ್ಮದ ಬಗ್ಗೆ ಅಸಡ್ಡೆ ತೋರುತ್ತಿರುವುದು ಕಳವಳಕಾರಿ ಎಂದರು.
ಅಕ್ಕಿಮಠದ ಗುರುಲಿಂಗ ದೇವರು ತಮ್ಮ ಆಶೀರ್ವಚನದಲ್ಲಿ ದೇವರು ಧರ್ಮದ ಹೆಸರಿನಲ್ಲಿ ದುರಾಚಾರಗಳು ನಡೆಯುತ್ತಿವೆ. ನಾವು ಒಳ್ಳೆಯದಕ್ಕಿಂತ ಕೆಟ್ಟದ್ದನ್ನು ಬೇಗ ಸ್ವೀಕರಿಸುತ್ತೇವೆ. ಬಸವಾದಿ ಶರಣರು ಏಕದೇವೋಪಾಸನೆಗೆ ಮಹತ್ವ ಕೊಟ್ಟಿದ್ದರೆಂಬುದನ್ನು ತಿಳಿಯಬೇಕು. ಜನಪ್ರತಿನಿಧಿಗಳಿಗೆ ಮಾರ್ಗದರ್ಶನ ಮಾಡುವುದು ಗುರುಗಳ ಕರ್ತವ್ಯ ಎಂದರು.
ಮಾಜಿ ಶಾಸಕ ನೆಹರು ಓಲೇಕಾರ, ನಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಮೇಲು ಎಂದು ಹೇಳಿ ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಕಾರ್ಯಗಳನ್ನು ವಿವರಿಸಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಗೌಡ ಗೊಲ್ಲರ ಮಾತನಾಡಿ, ಧರ್ಮ, ಜಾತಿಗಳ ಸಂಘರ್ಷದಲ್ಲಿ ಸಮಾಜ ನಲುಗಿ ಹೋಗಿದೆ. ಯುವಶಕ್ತಿ ಗೊಂದಲದಲ್ಲಿದೆ. ಸರ್ಕಾರದ ಅಗ್ಗದ ಪ್ರಚಾರದ ಯೋಜನೆಗಳು ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿವೆ ಎಂದರು.
ಗ್ರಾಪಂ ಅಧ್ಯಕ್ಷ ಪುಟ್ಟಯ್ಯ ಮಾಗೋಡ, ಪ್ರಾಚಾರ್ಯ ಕೃಷ್ಣಾ ಜವಳಿ ಹಾಗೂ ಕೊಟ್ರಪ್ಪ ಕೊಟಗಿ ಮಾತನಾಡಿದರು. ದೇವಸ್ಥಾನದ ಜೀರ್ಣೋದ್ಧಾರಕರು ಪ್ರಧಾನ ಅರ್ಚಕರೂ ಆದ ಯಲ್ಲಮ್ಮ ಪೂಜಾರ, ಶಿವಣ್ಣ ಜವಳಿ, ದೇವೇಂದ್ರಪ್ಪ ಅಳ್ಳಳ್ಳಿ, ಚಿದಂಬರಪ್ಪ ಕುದರಿ, ಸುಭಾಸ್ ಹಿಂಡಿ ಹಾಗೂ ನಾಗರಾಜ ಬಸೇಗಣ್ಣಿ ಮತ್ತಿತರರು ಇದ್ದರು.
ಹನುಮಂತ ದಾಸರ ಸ್ವಾಗತಿಸಿದರು. ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ಗುಡ್ಡಪ್ಪ ಚಟ್ರಮ್ಮನವರ ನಿರೂಪಿಸಿದರು. ಮಂಜುನಾಥ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement