ದೇಶದ ಅಭಿವೃದ್ಧಿಗೆ ಸಮರ್ಥ ನಾಯಕತ್ವ ಅಗತ್ಯ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಫೆ. 25
ದೇಶದ ಅಭಿವೃದ್ಧಿಗೆ ಆಡಳಿತ ನಡೆಸುವ ಸಮರ್ಥ ನಾಯಕನ ಅಗತ್ಯವಿದೆ. ಅದಕ್ಕಾಗಿ ಬಿಜೆಪಿಯು ಜನಾದೇಶ ಪ್ರಕಾರ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬರುವ ಲೋಕಸಭಾ ಚುನಾವಣೆಯು ಪಕ್ಷಕ್ಕೆ ಮಹತ್ವದ ತಿರುವು ನೀಡಲಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಶ್ರಮವಹಿಸಿ ಪಕ್ಷದ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿ ದೇಶದ ಅಭಿವೃದ್ಧಿಗೆ ಹಾಗೂ ರೈತರಿಗೆ ಪೂರಕವಾದ ನದಿ ಜೋಡಣೆ ಯೋಜನೆ ಮತ್ತು ವಿದೇಶದಲ್ಲಿರುವ ಕಪ್ಪುಹಣ ವಾಪಸ್ ದೇಶಕ್ಕೆ ತರುವುದು ಬಿಜೆಪಿಯ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಬದುಕಲಾಗದ ಸ್ಥಿತಿ:
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದಿಂದ ಇಂದು ಜನಸಾಮಾನ್ಯ ಬದುಕುವ ಸ್ಥಿತಿಯಲ್ಲಿಲ್ಲ. ಇದು ರಾಷ್ಟ್ರ ರಾಜಕಾರಣದಲ್ಲಿ ಸಂಕ್ರಮಣ ಕಾಲ. ಸ್ವತಃ ಆರ್ಥಿಕ ತಜ್ಞ ಮನಮೋಹನಸಿಂಗ್ ಆಡಳಿತದಲ್ಲಿ ದೇಶದ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿರುವುದು ವಿಪರ್ಯಾಸದ ಸಂಗತಿ. ಯುಪಿಎ ಸರ್ಕಾರ 10 ವರ್ಷಗಳ ಕಾಲ ಆಡಳಿತ ನಡೆಸಿದ್ದು, ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಇದೇ ಕೇಂದ್ರ ಸರ್ಕಾರದ ಮಹಾನ್ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಶಾಸಕ ಯು.ಬಿ. ಬಣಕಾರ ಪ್ರಾಸ್ತಾವಿಕ ಮಾತನಾಡಿ, ಗುಜರಾತ ರಾಜ್ಯದ ಅಭಿವೃದ್ಧಿ ಹರಿಕಾರ ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವ ಮೂಲಕ ಭಾರತವನ್ನು ಸಮೃದ್ಧಿ ಪಡಿಸುವಲ್ಲಿ ಸಂದೇಹವಿಲ್ಲ. ದೇಶದ ಕೃಷಿ, ವಿದ್ಯುತ್, ಕೈಗಾರಿಕೆಗಳಿಗಿರುವ ಸಮಸ್ಯೆಗಳು ಪರಿಹಾರವಾಗಲು ಹಾಗೂ ದೇಶದ ಭವಿಷ್ಯ ಉಜ್ವಲವಾಗಲು ಬಿಜೆಪಿ ಬಹುಮತದಿಂದ ಆಯ್ಕೆ ಮಾಡಿ ದೇಶವನ್ನು ಕಾಪಾಡಲು ಕಾರ್ಯಕರ್ತರು ಸದಾ ಸಿದ್ದರಿರಬೇಕೆಂದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಜನಹಿತ ಬಯಸುವ ಜನನಾಯಕ ದೇಶಕ್ಕೆ ಬೇಕಾಗಿದೆ. ರಾಜ್ಯದಲ್ಲಿ 20 ವರ್ಷಗಳಿಂದ ನೆನಗುದಿಗೆ ಬಿದ್ದ ಯೋಜನೆಗಳು ಬಿಜೆಪಿ ಸರ್ಕಾರವಿದ್ದಾಗ ಸಾಕಾರಗೊಂಡಿವೆ. ಹತ್ತು ತಿಂಗಳಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಸಿ.ಎಂ. ಉದಾಸಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾಧ್ಯಕ್ಷ ಬಸವರಾಜ ಕರೂದಿ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಪಪಂ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಮುಖಂಡರಾದ ಗಂಗರಾಜ ಚಪ್ಪರದಹಳ್ಳಿ, ದತ್ತಾತ್ರೇಯ ರಾಯ್ಕರ, ಸಿದ್ದು ನರೇಗೌಡ್ರ, ಪ್ರಭು ಮಳವಳ್ಳಿ ಇದ್ದರು. ಪಾಲಾಕ್ಷಗೌಡ ಪಾಟೀಲ ಸ್ವಾಗತಿಸಿದರು. ಮಹೇಶ ಗುಬ್ಬಿ ನಿರೂಪಿಸಿದರು. ಎಸ್.ಆರ್. ಅಂಗಡಿ ವಂದಿಸಿದರು.