ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಾಜ್ಯ 13ನೇ ಸ್ಥಾನಕ್ಕಿಳಿಸಿದ್ದೇ ಕಾಂಗ್ರೆಸ್ ಸಾಧನೆ

Vishwanath S
Updated On : 26 Feb 2014, 11:16 am

ರಾಣಿಬೆನ್ನೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಸಾಧಿಸುವುದರೊಂದಿಗೆ ದೇಶದಲ್ಲಿ 2ನೇ ಸ್ಥಾನಕ್ಕೇರಿದ ರಾಜ್ಯದ ಕೀರ್ತಿಯನ್ನು 13ನೇ ಸ್ಥಾನಕ್ಕಿಳಿಸಿರುವುದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವದ ಸಾಧನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.
ನಗರದ ಬಿಜೆಪಿ ಕಾರ್ಯಾಲಯದ ಎದುರು ಮಂಗಳವಾರ ಏರ್ಪಡಿಸಿದ್ದ ಭಾರತ ಗೆಲ್ಲಿಸಿ ತಾಲೂಕು ಬಿಜೆಪಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯದ ಸರ್ವತೋಮುಖ ಅಭ್ಯುದಯಕ್ಕಾಗಿ ಅನ್ನದಾತನ ಹೆಸರಿನಲ್ಲಿ ಕೃಷಿ ಬಜೆಟ್ ಮಂಡಿಸಿ ಅನ್ನದಾತನ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಅಲ್ಲದೇ ಬಿಜೆಪಿ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದ್ದ ವಿವಿಧ ಯೋಜನೆಗಳತ್ತ ಒಮ್ಮೆ ಕಣ್ಣಾಡಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಸರ್ಕಾರ ಅಸ್ತಿತ್ವದಲ್ಲಿದೆಯೇ?
ರಾಜ್ಯದಲ್ಲಿ ಹರಿಯುವ ನದಿಯ ಅಕ್ಕಪಕ್ಕದಲ್ಲಿರುವ ಹಾಗೂ ಇತರೆ ಕಾರಣಗಳಿಂದ ಸಂತ್ರಸ್ತ ಗ್ರಾಮಗಳೆಂದು ಗುರುತಿಸಲಾದ ರಾಜ್ಯದ ಸುಮಾರು 200 ಗ್ರಾಮಗಳನ್ನು ಸ್ಥಳಾಂತರಿಸಿ ನವಗ್ರಾಮಗಳನ್ನಾಗಿ ನಿರ್ಮಿಸಿ ಸಂತ್ರಸ್ತರ ಬಾಳಿಗೆ ಬೆಳಕು ನೀಡಿರುವುದು ಬಿಜೆಪಿ ಸರ್ಕಾರ. ಆಗ ಮುಖ್ಯಮಂತ್ರಿ ಯಾರಿದ್ದರು ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಬಿಜೆಪಿ ಟೀಕಿಸುವ ಬದಲು ರಾಜ್ಯದಲ್ಲಿ ನಿಮ್ಮ ಸರ್ಕಾರ ಜೀವಂತ ಇದೆಯೋ ಇಲ್ಲವೋ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ತಾಕೀತು ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ 2ನೇ ಬಜೆಟ್ ಮಂಡಿಸುವವರೆಗೂ ರಾಜ್ಯದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ರಾಜ್ಯದ ತುಂಬೆಲ್ಲಾ ರಸ್ತೆಗಳು ಹಾಳಾಗಿವೆ. ಜನರು ವಿವಿಧ ಸಮಸ್ಯೆಗಳ ಕುರಿತು ಪರಿಹಾರಕ್ಕಾಗಿ ನಿತ್ಯ ನನ್ನ ಬಳಿ ಬರುತ್ತಿದ್ದಾರೆ. ನಿಮ್ಮ ಸರ್ಕಾರ ರಾಜ್ಯದಲ್ಲಿ ಬದುಕಿದೆಯೋ ಇಲ್ಲವೋ ಯೋಚಿಸಿರಿ ಎಂದು ಯಡಿಯೂರಪ್ಪನವರು ಕಾಂಗ್ರೆಸ್ ಸರ್ಕಾರವನ್ನು  ತರಾಟೆಗೆ ತೆಗೆದುಕೊಂಡರು.
ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ಸಿ.ಎಂ ಉದಾಸಿ, ಶಿವರಾಜ ಸಜ್ಜನ, ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಜಿ. ಶಿವಣ್ಣ, ಸಿದ್ದರಾಜ ಕಲಕೋಟಿ, ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ನಗರಾಧ್ಯಕ್ಷ ವೀರಣ್ಣ ಅಂಗಡಿ ಮಾತನಾಡಿದರು.
ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಭಾರತಿ ಜಂಬಗಿ, ಎಸ್ಟಿ ಮೋರ್ಚಾ ಅಧ್ಯಕ್ಷ ಮಂಜುನಾಥ ಓಲೇಕಾರ, ಶಾಸಕರಾದ ಯು.ಬಿ. ಬಣಕಾರ, ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ಸೋಮಣ್ಣ ಬೇವಿನಮರದ, ರಾಮಣ್ಣ ಕೋಲಕಾರ, ಭೀಮಣ್ಣ ಯಡಚಿ, ಪ್ರಭಪಸ್ವಾಮಿ ಕರ್ಜಗಿಮಠ, ಪ್ರಕಾಶ ಪೂಜಾರ, ರವಿ ಮಾಂಡ್ರೆ, ಎಸ್.ಎಸ್. ರಾಮಲಿಂಗಣ್ಣನವರ, ಮಲ್ಲಿಕಾರ್ಜುನ ಅಂಗಡಿ, ಕಿರಣ ಅಂಗಡಿ ಇತರರು ಇದ್ದರು.
20 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು: ವಿಶ್ವಾಸ
ರಾಣಿಬೆನ್ನೂರು: ರಾಜ್ಯದಲ್ಲಿ ಬಿಜೆಪಿ ಒಡೆದು ಎರಡು ಪಕ್ಷಗಳು ಹುಟ್ಟಿಕೊಂಡು ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದ ಕಾರಣ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಈಗ ನಾವೆಲ್ಲ ಒಂದಾಗಿರುವ ಕಾರಣ ರಾಜ್ಯದಲ್ಲಿ ಬಿಜೆಪಿ ಬಲಿಷ್ಠ ಪಕ್ಷವಾಗಿ ಬೆಳೆದಿದ್ದು, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನಗಳಲ್ಲಿ ನಾವು ಗೆಲವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಬಹುತೇಕ ಎಲ್ಲ ಲೋಕಸಭಾ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಈಗಾಗಲೇ ಮುಕ್ತಾಯಗೊಂಡಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾನೇ ಸ್ಪರ್ಧಿಸುತ್ತಿದ್ದು ನನ್ನ ಗೆಲವು ಖಚಿತವೆಂದು ಮತದಾರರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಎಲ್ಲ ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧಿಸುವ ವಿಶ್ವಾಸವಿದೆ. ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಲು ರಾಜ್ಯದ ಜನ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಮಾಡಿರುವ ಸಾಧನೆಗಳೆ ಶ್ರೀರಕ್ಷೆಯಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement