ಧಾರವಾಡದಲ್ಲಿ ಕೆಎಟಿ ಸ್ಥಾಪಿಸಲು ಮನವಿ
ಹಿರೇಕೆರೂರು: ಉತ್ತರ ಕರ್ನಾಟಕದ ಕೇಂದ್ರ ಸ್ಥಳವಾದ ಧಾರವಾಡದಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ( ಕೆಎಟಿ) ಸ್ಥಾಪಿಸಬೇಕು ಎಂದು ಆಗ್ರಹಿಸಿ ಪಟ್ಟಣದ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್. ಮಣಕೂರ ಮಾತನಾಡಿ, ಉತ್ತರ ಕರ್ನಾಟಕದ ಜನತೆಗೆ ಧಾರವಾಡ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಈಗಾಗಲೇ ಹೈಕೋರ್ಟ್ ಪೀಠ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ಈ ಭಾಗದ ಜನತೆಗೆ ವೇಳೆ ಹಾಗೂ ಹಣದ ಉಳಿತಾಯದ ಮೂಲಕ ತುಂಬಾ ಅನುಕೂಲವಾಗಿದೆ. ಅದರಂತೆ ಕರ್ನಾಟಕ ಆಡಳಿತಾತ್ಮಕನ್ಯಾಯಮಂಡಳಿಯಲ್ಲಿ ಈ ಭಾಗದ ಜನತೆ ಹಲವಾರು ಪ್ರಕರಣಗಳು ಈ ನ್ಯಾಯಮಂಡಳಿಯಲ್ಲಿ ಬಾಕಿ ಇವೆ. ಈ ಭಾಗದ ಸಾರ್ವಜನಿಕರಿಗೆ ಈ ಪ್ರಕರಣಗಳು ಬಹು ಬೇಗ ಇತ್ಯರ್ಥವಾಗಲು ಹಾಗೂ ಎಲ್ಲರಿಗೂ ಅನುಕೂಲ ಮಾಡಿ ಕೊಡುವ ದೃಷ್ಟಿಯಿಂದ ಕೆಎಟಿಯನ್ನು ಧಾರವಾಡದಲ್ಲಿ ಸ್ಥಾಪಿಸಲು ಮುಖ್ಯಮಂತ್ರಿಗಳು ಮುಂದಾಗಬೇಕು ಎಂದು ತಿಳಿಸಿದರು. ಎರಡು ದಿನಗಳಿಂದ ಧಾರವಾಡ ಉಚ್ಚ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ನಡೆಸುತ್ತಿರುವ ಹೋರಾಟಕ್ಕೆ ಹಿರೇಕೆರೂರು ವಕೀಲರ ಸಂಘದ ಸಂಪೂರ್ಣ ಬೆಂಬಲವನ್ನು ಈ ಮೂಲಕ ನೀಡುತ್ತಿದ್ದವೆ ಎಂದು ತಿಳಿಸಿದರು. ಈ ಕುರಿತ ಮನವಿಯನ್ನು ಗ್ರೇಡ-2 ತಹಸೀಲ್ದಾರ್ ಟಿ.ಬಿ. ಹೂಸೂರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಈ ಸಂದರ್ರ್ಭದಲ್ಲಿ ನ್ಯಾಯವಾದಿಗಳಾದ ಎಸ್.ಆರ್. ಅಂಗಡಿ, ದೀಪಕ್ ಜವಳಿ, ದುರ್ಗೇಶ ತಿರುಕಪ್ಪನವರ, ಗಂಗಾಧರ ಮತ್ತೂರ, ವಿ.ಎನ್. ಮಡಿವಾಳರ, ಬಿ.ಜಿ. ಪಾಟೀಲ, ಎನ್.ಎಸ್. ಹುಲ್ಲತ್ತಿ, ಎಸ್.ವಿ. ನಾಯಕ, ಎಸ್.ಎಚ್. ಗೌಡರ, ಎಲ್.ಎಚ್. ಕಳ್ಳಿಮನಿ ಮೊದಲಾದವರು ಪಾಲ್ಗೊಂಡಿದ್ದರು.