ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜನಪದ ಕಲೆಗಳ ರಕ್ಷಣೆ ಅಗತ್ಯ: ಯಮನಪ್ಪ

Vishwanath S
Updated On : 1 Mar 2014, 11:16 am

ಶಿಗ್ಗಾಂವಿ: ಜನಪದ ಸಂಸ್ಕೃತಿ ಸಂರಕ್ಷಿಸಿಕೊಳ್ಳಬೇಕೆಂದರೆ ಗೊಂದಲಿಗ ಕಲೆ ಇತರೆ ಕಲೆಗಳನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದು ಕಾಗಿನೆಲೆಯ ಖ್ಯಾತ ಗೊಂದಲಿಗ ಕಲಾವಿದ ಯಮನಪ್ಪ ಬಿಸೆ ಅಭಿಪ್ರಾಯಪಟ್ಟರು.
ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-6 ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗೊಂದಲಿಗ ಕಲೆ ಕಲಿತವರಿಗೆ ಸಮಾಜದಲ್ಲಿ ಮೊದಲಿನ ಆದರ, ಗೌರವವಿಲ್ಲ. ಕಲೆ ನಂಬಿ ಜೀವನ ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ಯುವಕರು ಗೊಂದಲಿಗ ಕಲೆ ಕಲಿತುಕೊಳ್ಳಲು ಮನಸ್ಸು ಮಾಡುತ್ತಿಲ್ಲ ಎಂದು ವಿಷಾದಿಸಿದರು. ಈ ಕಲೆ ಉಳಿಯಬೇಕಾದರೆ ಮೂಲ ಕಲಾವಿದರು ಸೇರಿದಂತೆ ವಿದ್ವಾಂಸರು, ಬುದ್ಧಿಜೀವಿಗಳು, ಪ್ರಜ್ಞಾವಂತರು ಸಾಂಘಿಕ ಪ್ರಯತ್ನ ನಡೆಸಿದಾಗ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾನಪದ ವಿವಿ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಮಾತನಾಡಿ, ಜನಪದ ಕಲೆ, ಸಂಸ್ಕೃತಿ ಸಂರಕ್ಷಿಸಲು ವಿಶ್ವವಿದ್ಯಾಲಯವು ಬದ್ಧವಾಗಿದೆ. ಗೊಂದಲಿಗ ಕಲೆಯನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಲಿಸಿಕೊಡಲು ಸೂಕ್ತ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಡಿ.ಬಿ. ನಾಯಕ, ಮೌಲ್ಯಮಾಪನ ಕುಲಸಚಿವ ಮತ್ತು ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕ ಪ್ರೊ. ಸ.ಚಿ. ರಮೇಶ ಉಪಸ್ಥಿತರಿದ್ದರು. ಇದೇ ಸಂದರ್ಭ ಯಮನಪ್ಪ ಬಿಸೆ, ಲೋಕಪ್ಪ ಗೂಡಕರ, ರಂಗಪ್ಪ ಬಿಸೆ, ಫಕೀರಪ್ಪ ಬಿಸೆ ಅವರು ಗೊಂದಲಿಗ ಕಲೆ ಪ್ರದರ್ಶಿಸಿದರು. ಯಮನಪ್ಪ ಬಿಸೆ ಅವರನ್ನು ವಿಶ್ವವಿದ್ಯಾಲಯ ವತಿಯಿಂದ ಸನ್ಮಾನಿಸಲಾಯಿತು.
ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ್, ಎಂಬಿಎ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ. ಚಂದ್ರ ಪೂಜಾರಿ, ಡಾ. ಶ್ರೀಶೈಲ ಹುದ್ಧಾರ, ಕಾಗಿನೆಲೆಯ ವೈದ್ಯ ಡಾ. ಪ್ರಕಾಶ ಬಾರ್ಕಿ, ಎಂ. ನಾಗರಾಜ್, ಪುಂಡಲೀಕ ಹಾಗೂ ವಿವಿಯ ವಿದ್ಯಾರ್ಥಿಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement