ಅದ್ಧೂರಿ ಕಾರ್ತಿಕೋತ್ಸವ, ಗುಗ್ಗಳ
ಹಿರೇಕೆರೂರು: ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ವೀರ ಮಹೇಶ್ವರ ದೇವರ ಕಾರ್ತಿಕೋತ್ಸವ ಹಾಗೂ ಗುಗ್ಗಳ ಮಹೋತ್ಸವ ಅದ್ಧೂರಿಯಾಗಿ ಜರುಗಿದವು, ಪುರವಂತರ ಸಂಘದ ರಾಜ್ಯಾಧ್ಯಕ್ಷ ಮಹೇಶ್ವರಗೌಡ ಲಿಂಗದಳ್ಳಿ ನೇತೃತ್ವದಲ್ಲಿ ಐದು ಜತೆ ಗುಗ್ಗಳ ಹಾಗೂ ವಿವಾಹಗಳು ಜರುಗಿದವು.
ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮದುವೆ ಮನುಷ್ಯ ಜೀವನದ ಮಹತ್ವದ ಘಟ್ಟ. ವಧು-ವರರು ಪರಸ್ಪರ ಅನುನಯ, ಸಾಮರಸ್ಯದ ಜೀವನ ನಡೆಸಬೇಕು. ಸುಖ ಕಷ್ಟದಲ್ಲಿ ಇಬ್ಬರೂ ಸಮಾನ ಪಾಲು ಪಡೆದು, ಹಾಲು-ಜೇನಿನಂತೆ ಸಂಸಾರ ನಡೆಸಿ, ಪುಣ್ಯ ಪ್ರಾಪ್ತಿ ಪಡೆಯಬೇಕು ಎಂದು ನುಡಿದರು.
ಲಿಂಗದಳ್ಳಿ ಮಠದ ವೀರಭದ್ರ ಮಹಾಸ್ವಾಮಿಗಳು ಮಾತನಾಡಿ, ಸಾಮೂಹಿಕ ಮದುವೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ. ವೇಳೆ, ಹಣ ಉಳಿತಾಯ ಹಾಗೂ ಸಮಾಜದ ಅಭಿವೃದ್ಧಿಗೆ ಅನುಕೂಲವಾಗಿವೆ. ದಂಪತಿ ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗುವ ಮೂಲಕ ಸುಖಜೀವನ ನಡೆಸಬೇಕು ಎಂದರು.
ಗ್ರಾಪಂ ಸದಸ್ಯರಾದ ಶೋಭಾ ಹಲಗೇರಿ, ಶೀತವ್ವ ಮಾಳಿಗೇರ, ಹನುಮಂತಪ್ಪ ಕುರುಬರ, ಸಣಬಸಪ್ಪ ಚಳಗೇರಿ, ಎಸ್.ಎಸ್. ಪ್ರಸಾದಿಮಠ, ಗಂಗಾಧರ ಮಲೆಬೆನ್ನೂರು, ಪರಮೇಶಪ್ಪ ಹಲಗೇರಿ ಇದ್ದರು.