ಶೋಷಣೆ ಮುಕ್ತ ವಾತಾವರಣ ಬರಲಿ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 1
ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ನಿತ್ಯ ಎಂಬಂತೆ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರು ಸಮಾನತೆಯಿಂದ ಬದುಕುವಂತಾಗಲು ಶೋಷಣೆ ಮುಕ್ತ ವಾತಾವರಣ ನಿರ್ಮಾಣ ಮಾಡುವುದು ಅನಿವಾರ್ಯ. ಅದಕ್ಕಾಗಿ ಸರ್ಕಾರ ಹಾಗೂ ಸಮಾಜ ಮುಂದಾಗಬೇಕಿದೆ ಎಂದು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಜಿಲ್ಲಾಧ್ಯಕ್ಷೆ ಮಾಧುರಿ ದೇವಧರ್ ಹೇಳಿದರು.
ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಉಪ ಸಮಿತಿ ಹೊಸ ವರ್ಷದ ಅಂಗವಾಗಿ ನಗರದ ಮೆಟ್ರಿಕ್ ನಂತರದ ಬಾಲಕಿಯರ ಕಾಲೇಜು ಹಾಸ್ಟೆಲ್‌ನಲ್ಲಿ ಏರ್ಪಡಿಸಿದ್ದ 'ದೌರ್ಜನ್ಯ ಮುಕ್ತ ವರ್ಷವನ್ನಾಗಿ 2014ನ್ನು ಸ್ವಾಗತಿಸೋಣ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲರ ಜತೆಗೂ ಬೆರೆತು ಬದುಕು ಕಟ್ಟುವಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯನ್ನು ಪಶುವಿಗಿಂತ ಕೀಳಾಗಿ ನೋಡುವ ಮನಸ್ಥಿತಿ ಅಪಾಯಕಾರಿ. ಪುರಾತನ ಕಾಲದಿಂದಲೂ ಮಹಿಳೆಯನ್ನು ದೇವತೆ ಹಾಗೂ ರಾಕ್ಷಸಿಯಾಗಿ ನೋಡಿರುವ ಈ ಸಮಾಜ ಇಂದಿಗೂ ಆಕೆಯನ್ನು ಮಹಿಳೆಯಾಗಿ ನೋಡುತ್ತಿಲ್ಲ. ಸಂಸ್ಕೃತಿಯ ಸೋಗಿನಲ್ಲಿ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯದಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಅದು ನಮ್ಮ ಸಂಸ್ಕೃತಿಯಲ್ಲ ಎಂದರು.
ವಿದ್ಯಾರ್ಥಿನಿಯರು ಜಾಗೃತರಾಗಬೇಕೆಂದರೆ ಶಿಕ್ಷಣ ಪಡೆದುಕೊಳ್ಳಬೇಕು. ತಮ್ಮ ಹಕ್ಕಗಳ ರಕ್ಷಣೆ ಹಾಗೂ ಭದ್ರತೆಯನ್ನು ಸರ್ಕಾರ ಮತ್ತು ಸಮಾಜ ನೀಡದೆ ಹೋದಲ್ಲಿ ಚಳವಳಿಗೂ ಧುಮುಕಬೇಕಾಗುತ್ತದೆ. ಅದಕ್ಕೆ ಯುವ ಹೋರಾಟಗಾರ್ತಿ ಮಲಾಲಾ ಆದರ್ಶವಾಗಬೇಕಿದೆ ಎಂದು ಹೇಳಿದರು.
ನಿಲಯ ಪಾಲಕರಾದ ವನಿತಾ ಸುಂಕದ, ಎಸ್‌ಎಫ್‌ಐ ವಿದ್ಯಾರ್ಥಿನಿಯರ ಉಪ ಸಮಿತಿಯ ರಾಜ್ಯ ಸಂಚಾಲಕಿ ರೇಣುಕಾ ಕಹಾರ ಮಾತನಾಡಿದರು. ಶಾಂತಾ ನಾಡಿಗೇರ ಇದ್ದರು. ಅನಿತಾ ಎಂ. ನಿರೂಪಿಸಿದರು. ಅನುಪಮಾ ಸ್ವಾಗತಿಸಿದರು. ರಾಜೇಶ್ವರಿ ಪಾಟೀಲ ವಂದಿಸಿದರು.