ಏಸುಕ್ರಿಸ್ತ ಮನುಕುಲ ಬೆಳಗಿದ ಸಂತ: ರತ್ನಾ
ಬ್ಯಾಡಗಿ: ಬಡವರ ಸಂಕಷ್ಟಗಳಿಗೆ ಸ್ಪಂದಿಸಲು ಅರಮನೆಗಳಲ್ಲಿ ಜನಿಸಬೇಕಿಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಂತ ಏಸುಕ್ರಿಸ್ತರು ಮನುಕುಲದ ಕಣ್ಣೀರು ಒರೆಸಿದ್ದನ್ನು ಮರೆಯುವಂತಿಲ್ಲ ಎಂದು ರೆ. ರತ್ನಾ ನಂದಕುಮಾರ್ ಹೇಳಿದರು.
ತಾಲೂಕಿನ ಮೋಟೆಬೆನ್ನೂರಿನ ಪ್ರೊಟೆಸ್ಟೆಂಟ್ ಸಿಎಸ್ಐ ಶಾಂತಿ ಚರ್ಚ್ನಲ್ಲಿ ಹೊಸ ವರ್ಷದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಉದ್ದೇಶಿಸಿ ಅವರು ಮಾತನಾಡಿದರು. ಬಡವ-ಬಲ್ಲಿದರೆಂಬ ಭೇದ ತೋರದೆ, ಎಲ್ಲರಿಗೂ ಪ್ರೀತಿಯ ಅರ್ಥ ಹೇಳಿಕೊಟ್ಟ ಏಸು ಮನುಕುಲದ ಉದ್ಧಾರಕ್ಕೆ ಅಭಯಹಸ್ತ ಚಾಚಿದರೆಂದು ಶ್ಲಾಘಿಸಿದರು.
ರೆ. ಇಮ್ಯಾನುಯೆಲ್ ಪುನೀತ್ ಮಾತನಾಡಿ, ಏಸುಕ್ರಿಸ್ತರು ಕತ್ತಲೆಯಲ್ಲಿ ಬದುಕು ಸಾಗಿಸುತ್ತಿದ್ದ ಜನರಿಗೆ ಜ್ಞಾನದ ಬೆಳಕು ನೀಡಿದ್ದಾರೆ. ಇದರ ದ್ಯೋತಕವಾಗಿ ಚರ್ಚ್ಗಳಲ್ಲಿ ದೀಪಗಳನ್ನು ಬೆಳಗಿಸಿ, ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದರು.
ಕ್ರೈಸ್ತ ಸಮಾಜದ ಮುಖಂಡರಾದ ರತ್ನಾಕರ್ ಪುನೀತ್, ಜಯವಂತ ಗುಡಗೂರ, ಸುಕೀರ್ತಪ್ಪ ಗುತ್ತಲ, ಎಚಕೇಲಪ್ಪ ಪುನೀತ್, ಗುರುಶಾಂತ ಪುನೀತ್, ಜಾನ್ ಪುನೀತ್, ಮಾಲಾ ಗುಡಗೂರ, ಲೂಥರ್ ಕಾಲ್ಪಲ್, ಎಲಿಜಬೆತ್ ಅಗಡಿ, ಮೋಹನಪ್ಪ ಮಾಳಗಿ, ಮುರ್ತಾ ಕಾಲ್ಪಲ್, ಪ್ರಭಾಕರ ಗುಡಗೂರ, ಸಲೀನಾ ಕಾಲ್ಪಲ್, ಸಂಜಯ್ ಕಾಲ್ಪಲ್, ಸಂಜೀವಿನಿ ಭಾರಾಟಕ್ಕೆ, ಪ್ರೆಸ್ಕಿಲಾ ಅರಳೀಕಟ್ಟಿ ಪಾಲ್ಗೊಂಡಿದ್ದರು.