ಪೌರಾಯುಕ್ತರ ಕಚೇರಿಯಲ್ಲಿ ನಗರಸಭೆ ಗುತ್ತಿಗೆದಾರರ ಧರಣಿ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 2
ನಗರಸಭೆ ವತಿಯಿಂದ ವಿವಿಧ ಯೋಜನೆಯಲ್ಲಿ ಕಾಮಗಾರಿ ನಿರ್ವಹಿಸಿದ ರು. 4 ಕೋಟಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಗುತ್ತಿಗೆದಾರರು ನಗರಸಭೆ ಆಯುಕ್ತರ ಕಚೇರಿಯಲ್ಲಿ ಗುರುವಾರ ಧರಣಿ ನಡೆಸಿದರು.
ನಗರಸಭೆ ವತಿಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆ, 13ನೇ ಹಣಕಾಸು ಯೋಜನೆ ಹಾಗೂ ಎಸ್‌ಎಫ್‌ಸಿ ಯೋಜನೆಯಲ್ಲಿ ನಗರಸಭೆ ನೀಡಿದ ಆದೇಶದಂತೆ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಈ ಬಗ್ಗೆ ಮೂರನೇ ತಂಡದಿಂದ ಪರಿಶೀಲನಾ ವರದಿ ಹಾಗೂ ಉಪವಿಭಾಗಾಧಿಕಾರಿ ಅವರಿಂದ ಸ್ಥಳ ಪರಿಶೀಲನೆಯೂ ನಡೆದಿದೆ. ಆದರೆ ಕಾಮಗಾರಿ ಕೈಗೊಂಡ ತಮಗೆ ಪೌರಾಯುಕ್ತರು ಇದುವರೆಗೂ ಬಿಲ್ ಪಾವತಿಸಿಲ್ಲ. ಪೌರಾಡಳಿತ ನಿರ್ದೇಶನಾಲಯವು ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಬಿಲ್ ನೀಡುವಂತೆ ತಿಳಿಸಿ ರು. 4 ಕೋಟಿ ಹಣ ಬಿಡುಗಡೆ ಮಾಡಿದೆ. ವರ್ಷ ಕಳೆದರೂ ಇದುವರೆಗೆ ತಮಗೆ ಬಿಲ್ ನೀಡುತ್ತಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದರು. ಪೌರಾಯುಕ್ತರ ಕಚೇರಿಯಲ್ಲೇ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಾವತಿಗೆ ಸೂಚಿಸಿದರೂ...
ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಸವರಾಜ ಪೋಲನವರ, ಪ್ರವೀಣ ಶೆಟ್ಟರ್ ಮಾತನಾಡಿ, ಕಾಮಗಾರಿ ಕಳಪೆಯಾಗಿದ್ದರೆ ಬಿಲ್ ನೀಡುವಂತೆ ನಾವು ಕೇಳುತ್ತಿಲ್ಲ. ಈ ಕಾಮಗಾರಿ ಪೂರ್ಣಗೊಳಿಸಿ, ಅದನ್ನು ಪರಿಶೀಲನೆ ಮಾಡಲಾಗಿದೆ. ಹಣ ಪಾವತಿಸುವಂತೆ ಪೌರಾಡಳಿತ ನಿರ್ದೇಶನಾಲಯ ಸೂಚಿಸಿದೆ. ಯಾವುದೋ ಕಾಮಗಾರಿ ಸರಿಯಾಗಿಲ್ಲ ಎಂದು ಎಲ್ಲ ಬಿಲ್ ತಡೆ ಹಿಡಿಯುವುದು ಸರಿಯಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಪೌರಾಯುಕ್ತರೇ ಕಾರಣ ಎಂದು ಆರೋಪಿಸಿದರು.
ಪ್ರತಿಭಟನೆ ಕೈಬಿಡುವಂತೆ ಪೌರಾಯುಕ್ತ ಶಿವಕುಮಾರಯ್ಯ ಗುತ್ತಿಗೆದಾರರಲ್ಲಿ ಮನವಿ ಮಾಡಿದರು. ನಗರಸಭೆ ಆಡಳಿತ ಮಂಡಳಿ ಜತೆ ಚರ್ಚಿಸಿ, ಗುತ್ತಿಗೆದಾರರು, ಶಾಸಕರು, ಗುತ್ತಿಗೆದಾರರು ಎಲ್ಲರೂ ನಿಯೋಗದಲ್ಲಿ ತೆರಳಿ ಪೌರಾಡಳಿತ ಸಚಿವರು, ಅಧಿಕಾರಿಗಳನ್ನು ಭೇಟಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಳ್ಳೋಣ ಎಂದು ಸಲಹೆ ನೀಡಿದರು.
ಇದಕ್ಕೆ ಒಪ್ಪದ ಗುತ್ತಿಗೆದಾರರು, ಸಮಸ್ಯೆ ಬಗೆಹರಿಸುವಂತೆ ಅನೇಕ ಬಾರಿ ಮನವಿ ನೀಡಲಾಗಿದೆ. ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದೇವೆ. ಈವರೆಗೆ ಸ್ಪಂದಿಸಿಲ್ಲ. ಬಿಲ್ ಪಾವತಿಸದ ಹೊರತು ನಾವು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಅಹೋರಾತ್ರಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಸಿದರು.
ವಿಜಯ ಚಿನ್ನಿಕಟ್ಟಿ, ಹನುಮಂತಪ್ಪ ಬಂಡಿವಡ್ಡರ, ಮಾಲತೇಶ ಗಾಜಿ, ಜಯಪ್ಪ ದೇಸಳ್ಳಿ, ಚಂದ್ರಪ್ಪ ಕ್ಯಾತಣ್ಣನವರ, ಮಲ್ಲೇಶ ಭೋವಿ, ಟಿ.ಎಫ್. ತಳವಾರ, ಉಮ್ಮೀದ್ ನದಾಫ್, ಎಚ್.ಆರ್. ಹಸನ್‌ವಾಲೆ, ಎಸ್. ಕೃಷ್ಣ ಸೇರಿ 30ಕ್ಕೂ ಹೆಚ್ಚು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಧಿಕಾರಿಗಳ ತಪ್ಪಿಗೆ...
ಈ ಕುರಿತು ಪೌರಾಯುಕ್ತ ಶಿವಕುಮಾರಯ್ಯ ಅವರನ್ನು ಕೇಳಿದಾಗ, ಈ ಹಿಂದೆ ನಗರಸಭೆಯಲ್ಲಿದ್ದ ಕೆಲ ಅಧಿಕಾರಿಗಳು ಮಾಡಿದ ಅಕ್ರಮ, ಅವ್ಯವಹಾರದಿಂದ ಗುತ್ತಿಗೆದಾರರು ತೊಂದರೆ ಪಡುವಂತಾಗಿದೆ. 13ನೇ ಹಣಕಾಸು, ಎಸ್‌ಎಫ್‌ಸಿ ಯೋಜನೆಯಲ್ಲಿ ಜಿಲ್ಲಾಧಿಕಾರಿ ಒಪ್ಪಿಗೆ ಪಡೆಯದೆ ಕಾಮಗಾರಿ ಗುತ್ತಿಗೆ ನೀಡಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ತಪ್ಪು ಎಸಗಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜಾರಿಯಾಗಲಿದೆ. ಸಿಎಂಎಸ್‌ಎಂಟಿಡಿಪಿಎಸ್ ಯೋಜನೆಯಲ್ಲಿ ರು. 30 ಕೋಟಿ ಅನುದಾನ ಮಂಜೂರಾಗಿತ್ತು. ಅದರಲ್ಲಿ 124 ಪ್ಯಾಕೇಜ್ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿತ್ತು. ಆದರೆ ಅಂದಿನ ನಗರಸಭೆ ಅಧಿಕಾರಿಗಳು ಯಾರ ಒಪ್ಪಿಗೆಯನ್ನೂ ಪಡೆಯದೆ ಅದನ್ನು 350 ಕಾಮಗಾರಿ ಮಾಡಿ ಲೋಪ ಎಸಗಿದ್ದಾರೆ. ಬಿಲ್ ಪಾವತಿಯಾಗದಿರಲು ಗುತ್ತಿಗೆದಾರರ ತಪ್ಪಿಲ್ಲ ಎಂದರು.