ಸೇತುವೆಯಿಂದ ಬಿದ್ದು ಸೇನಾ ವೈದ್ಯ ಸಾವು
ರಾಣಿಬೆನ್ನೂರು: ಗೋವಾದಿಂದ-ಬೆಂಗಳೂರಿಗೆ ಸಾರಿಗೆ ಸಂಸ್ಥೆಯ ಹವಾನಿಯಂತ್ರಿತ ಬಸ್‌ನಲ್ಲಿ ಕುಟುಂಬ ಸಮೇತ ಹೊರಟಿದ್ದ ಅಲಹಾಬಾದ್ ಮಿಲಿಟರಿ ಆಸ್ಪತ್ರೆಯ ವೈದ್ಯರೊಬ್ಬರು ಮೂತ್ರ ವಿಸರ್ಜನೆಗೆ ಇಳಿದಿದ್ದಾಗ ಸೇತುವೆಯಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಬೆಳಗಿನ ಜಾವ ಹಲಗೇರಿ ಕ್ರಾಸ್ ಸಮೀಪ ರಾ.ಹೆ. 4ರಲ್ಲಿ ಸಂಭವಿಸಿದೆ.
ಬೆಳಗಿನ ಜಾವ 4.50ಕ್ಕೆ ಪ್ರಯಾಣಿಕರ ಕೋರಿಕೆ ಮೇರೆಗೆ ಮೂತ್ರ ವಿಸರ್ಜನೆಗೆಂದು ಚಾಲಕ ಬಸ್ ನಿಲ್ಲಿಸಿದ್ದ. ಸೇತುವೆ ಪಕ್ಕಕ್ಕೆ ತೆರಳಿದ್ದ ಮಿಲಿಟರಿ ಆಸ್ಪತ್ರೆ ವೈದ್ಯ ಡಾ ಕರ್ನಲ್ ಆಶಿಫ್ ಚಕ್ರವರ್ತಿ (57) ಸೇತುವೆಯಿಂದ 7 ಅಡಿ ಕೆಳಕ್ಕೆ ಬಿದ್ದು ಕೆಳಕ್ಕೆ ಬಿದ್ದಿದ್ದಾರೆ. ಅವರ ತಲೆ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದವು. ತಲೆಯಿಂದ ರಕ್ತ ಸುರಿಯುತ್ತಿದ್ದ ಕಾರಣ ಗಾಬರಿಗೊಂಡ ಪತ್ನಿ ನೀಲಂ ಹಾಗೂ ಪುತ್ರಿ ಆಶ್ರಿತಾ ಸಹ ಪ್ರಯಾಣಿಕರ ನೆರವಿನೊಂದಿಗೆ ಆಶಿಫ್ ರನ್ನು ರಾಣಿಬೆನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಎಎಸ್‌ಐ ಸಿ.ವಿ. ತಾವರಗಿಮಠ ತಿಳಿಸಿದರು. ಸುದ್ದಿ ತಿಳಿದ ಎಸ್ಪಿ ಎನ್. ಶಶಿಕುಮಾರ್, ಡಿವೈಎಸ್ಪಿ ಎಸ್.ಎಸ್. ಗಡಾದ, ಗ್ರಾಮೀಣ ಪಿಎಸ್‌ಐ ಎನ್.ಸಿ. ಕಾಡದೇವರಮಠ, ನಗರ ಠಾಣೆ ಸಿಪಿಐ ರವಿಂದ್ರ ಕುರುಬಗಟ್ಟಿ ಆಸ್ಪತ್ರೆಗೆ ಭೇಟಿ ನೀಡಿ, ಮರಣೋತ್ತರ ಪರೀಕ್ಷೆ ನಡೆಸಿ, ಬಂಧುಗಳಿಗೆ ಶವ ಹಸ್ತಾಂತರಿಸಿದರು.
ಹಲ್ಲೆ ಆರೋಪಿಗಳಿಗೆ ಶಿಕ್ಷೆ
ಹಾವೇರಿ: ಬೆಂಚಿಹಳ್ಳಿ ಗ್ರಾಮದ ಬಸವಣ್ಣೆಪ್ಪ ಚಂದ್ರಗೇರಿ ಹೊಲದಲ್ಲಿ ರಂಟೆ ಹೊಡೆಯುತ್ತಿದ್ದಾಗ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾದ ಕಾರಣ ಐವರು ಆರೋಪಿಗಳಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ತಲಾ ರು. 5 ಸಾವಿರ ದಂಡ ವಿಧಿಸಿ ಇಲ್ಲಿಯ ನ್ಯಾಯಾಲಯ ಆದೇಶಿಸಿದೆ. ಚಂದ್ರಪ್ಪ, ಶಿವಾನಂದ ತಳವಾರ, ಸದಾನಂದ ತಳವಾರ, ದೇವೇಂದ್ರಪ್ಪ ಹೊಸಳ್ಳಿ, ಚನ್ನಬಸಪ್ಪ ಗೊಟಗೋಡಿ ಶಿಕ್ಷೆಗೊಳಗಾದವರು. ಬೆಂಚಿಹಳ್ಳಿಯ ಬಸವಣ್ಣೆಪ್ಪ ಚಂದ್ರಗೇರಿ ನೀಡಿದ ದೂರು ದಾಖಲಿಸಿಕೊಂಡ ಹಾವೇರಿ ಗ್ರಾಮೀಣ ಪೊಲೀಸರು ತನಿಖೆ ನಡೆಸಿ, ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಗಲಿಂಗನಗೌಡ ಪಾಟೀಲರು, ಆಪಾದನೆಗಳು ರುಜುವಾತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಎಸ್.ಎಸ್. ಕುದರಿ ವಾದ ಮಂಡಿಸಿದ್ದರು.