ಉತ್ತಮ ಆರೋಗ್ಯ, ಶಿಸ್ತಿಗಾಗಿ ಕ್ರೀಡೆ: ಪಠಾಣ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 3
ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಲು ಶಿಸ್ತು ಮುಖ್ಯ. ಕ್ರೀಡೆಯಿಂದ ಮಾತ್ರ ಶಿಸ್ತು ಕಲಿಯಲು ಸಾಧ್ಯ. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಶಿಸ್ತು ಮತ್ತು ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಐ.ಯು. ಪಠಾಣ ಹೇಳಿದರು.
ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಶುಕ್ರವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರಿಗೆ ಹಮ್ಮಿಕೊಂಡಿದ್ದ 2013-14ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಸರ್ಕಾರಿ ನೌಕರರು ನಿತ್ಯ ಒತ್ತಡದಲ್ಲೇ ಕೆಲಸ ಮಾಡಬೇಕಾಗುತ್ತದೆ. ಈ ಒತ್ತಡದಿಂದ ಹೊರಬರಲು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲಾಧಿಕಾರಿ ಗೈರು ಹಾಜರಾಗಿದ್ದು ವಿಪರ್ಯಾಸ. ನೌಕರರ ಕ್ರೀಡಾಕೂಟಕ್ಕೆ ಬಂದು, ಅಗತ್ಯ ಸೌಲಭ್ಯ ಸಿಕ್ಕಿದೆಯೇ ಎಂದು ನೋಡಿದ್ದರೆ ಇತರ ನೌಕರರಿಗೆ ಉತ್ತೇಜನ ಸಿಗುತ್ತಿತ್ತು. ನಿರ್ಣಾಯಕರು ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ನಿಷ್ಪಕ್ಷಪಾತ ತೀರ್ಪು ನೀಡಬೇಕು ಎಂದರು.
ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ ಮಾತನಾಡಿ, ವರ್ಷಪೂರ್ತಿ ಕೆಲಸ ಮಾಡಿದ ಜೀವಗಳಿಗೆ ಕ್ರೀಡೆಗಳು ನವಚೈತನ್ಯ ತುಂಬುತ್ತವೆ. ನೌಕರರು ಕ್ರೀಡೆಗಳ ಜತೆಗೆ ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡಬೇಕು ಎಂದು ಹೇಳಿದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ. ಕಿನ್ನಾಳ ಮಾತನಾಡಿ, ಮನುಷ್ಯ ದೇಹದ ಸಮತೋಲನ ಕಾಪಾಡಿಕೊಳ್ಳಲು, ಸದೃಢವಾದ ದೇಹ ಮತ್ತು ಮನಸ್ಸು ಹೊಂದಲು ಕ್ರೀಡೆಗಳು ಸಹಾಯಕ. ಉತ್ತಮ ಆರೋಗ್ಯವಿದ್ದಾಗ ಮಾತ್ರ ಚೆನ್ನಾಗಿ ಕಾರ್ಯನಿರ್ವಹಿಸಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದವರಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಸಮವಸ್ತ್ರ ನೀಡುವುದಾಗಿ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮುತ್ತು ಕಾಮಾಚ್ಚಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಕಮತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ವಿ. ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎನ್. ಜಾವೂರ ಇದ್ದರು. ಭಾಗ್ಯವತಿ ಕೋಡಬಾಳ ಪ್ರಾರ್ಥಿಸಿದರು. ಜಿಲ್ಲಾ ತರಬೇತಿದಾರ ಜಮಾಅಹ್ಮದ್ ಸ್ವಾಗತಿಸಿದರು. ಎಫ್.ಬಿ. ಮರಳೂರ ನಿರೂಪಿಸಿದರು. ಶಂಕರ ಸುತಾರ ವಂದಿಸಿದರು.