ಖಾತ್ರಿ ಜಾಗೃತಿ ಜಾಥಾ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜ. 3
ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಹೇಳಿದ ಮಹಾತ್ಮ ಗಾಂಧಿ ಹೆಸರಿನಲ್ಲೇ ಆರಂಭವಾದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಈಗ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ತಾಲೂಕಿನ 35 ಗ್ರಾಪಂಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಮಾಹಿತಿ ನೀಡಿ, ಜಾಗೃತಿ ಮೂಡಿಸಲು ತಾಪಂ ವತಿಯಿಂದ ಜಾಥಾ ಆರಂಭಿಸಲಾಗಿದೆ. ತಾಪಂ ಅಧ್ಯಕ್ಷೆ ಹೂವಕ್ಕ ನಾಗೂರ, ಇಒ ಕೆ. ಕೃಷ್ಣಮೂರ್ತಿ, ವ್ಯವಸ್ಥಾಪಕ ಬಸವರಾಜ ಶಿಡೆನೂರು, ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ತರಬೇತಿ ಸಂಯೋಜಕರಾದ ದಿಂಗಾಲೇಶ್ವರ ಅಂಗೂರು ಈ ಜಾಥಾದ ನೇತೃತ್ವ ವಹಿಸಿದ್ದಾರೆ. ಜಾಥಾ ತಾಲೂಕಿನ ಎಲ್ಲೆಡೆ ಸಂಚರಿಸಿ, ಅರಿವು ಮೂಡಿಸುತ್ತಿದೆ.
ಆಶಾಕಿರಣ: ಗ್ರಾಪಂ ಮೂಲಕ ಅನುಷ್ಠಾನಗೊಂಡಿರುವ ಎಂಜಿಎಆರ್ಇಜಿ (ನರೇಗಾ) ಯೋಜನೆ ಬಡವರು, ಕೃಷಿ ಕಾರ್ಮಿಕರು, ಸಣ್ಣ-ಅತಿಸಣ್ಣ ರೈತರು, ಭೂರಹಿತ ಕೃಷಿಕರು, ವಿದ್ಯಾವಂತ ನಿರುದ್ಯೋಗಿಗಳಿಗೆ ಆಶಾಕಿರಣವಾಗಿದೆ.
ದುಡಿಯುವ ಆಸಕ್ತಿ ಇರುವ ವಯಸ್ಕರು ಗ್ರಾಪಂನಲ್ಲಿ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಮಾಡಿಸಿದರೆ, ಆರ್ಥಿಕ ವರ್ಷದಲ್ಲಿ 100 ದಿನ ಕೆಲಸ ಸಿಗುತ್ತದೆ. ದಿನಕ್ಕೆ ರು. 174 ಕೂಲಿ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ವಾರಾಂತ್ಯ ಅಥವಾ ಗರಿಷ್ಠ 15 ದಿನಗಳಲ್ಲಿ ಕಡ್ಡಾಯವಾಗಿ ಹಣ ಪಾವತಿ ಆಗುತ್ತದೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ಲೋಪವಾದರೆ, ದುಡಿಸಿಕೊಂಡೂ ಕೂಲಿ ನೀಡದಿದ್ದರೆ, ಅವ್ಯವಹಾರ ಕಂಡುಬಂದರೆ ರಾಜ್ಯ ಮಟ್ಟದಲ್ಲಿ ಉಚಿತ ಸಹಾಯವಾಣಿಗೆ (18004258666) ಕರೆಮಾಡಿ, ಅಹವಾಲು ಹೇಳಿಕೊಳ್ಳಲೂ ಅವಕಾಶವಿದೆ.
ಕೈಗೊಳ್ಳುವ ಕಾಮಗಾರಿಗಳು
ಹೊಲ, ಗದ್ದೆ, ತೋಟಗಳಿಗೆ ಉತ್ತಮ ದಾರಿ ನಿರ್ಮಾಣ ಮಾಡಿಕೊಳ್ಳಬಹುದು. ಬಯಲು ಮಲ ವಿಸರ್ಜನೆ ತಪ್ಪಿಸಲು ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವ ಫಲಾನುಭವಿಗೆ ಖಾತ್ರಿ ಯೋಜನೆಯಲ್ಲಿ ರು. 4,500, ನಿರ್ಮಲ ಭಾರತ ಅಭಿಯಾನದಲ್ಲಿ ರು. 4,700 ಸಹಾಯಧನವೂ ಲಭ್ಯ. ಶುದ್ಧ ನೀರು ಘಟಕ ಸ್ಥಾಪನೆ, ಕುಡಿಯುವ ನೀರಿನ ಯೋಜನೆಗಳು, ಕೆರೆ ಅಭಿವೃದ್ಧಿ, ಕೊಳವೆ ಹಾಗೂ ತೆರೆದ ಬಾವಿಗಳಲ್ಲಿ ಅಂತರ್ಜಲ ವೃದ್ಧಿಗೆ ಅವಕಾಶವಿದೆ.
ರೈತರು ಹಾಗೂ ಕುರಿಗಾರರು ಸಾಕಿರುವ ಕುರಿ, ಜಾನುವಾರುಗಳಿಗೆ ದೊಡ್ಡಿ ಅಥವಾ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಹಣಕಾಸು ನೆರವು ಸಿಗುತ್ತದೆ. ರೈತರು ತಮ್ಮ ಹೊಲಗಳಲ್ಲಿ ಒಕ್ಕಲುತನ ಮಾಡಲು, ಸಾಮೂಹಿಕ ಕಣ ಸಿದ್ಧಪಡಿಸಲು, ಶಾಲೆಗೆ ಸುಸಜ್ಜಿತ ಆಟದ ಮೈದಾನ, ಆವರಣ ಗೋಡೆ, ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿ ಕುರಿತು ಚರ್ಚಿಸಲು ರಾಜೀವಗಾಂಧಿ ಸೇವಾ ಕೇಂದ್ರದ ಹೆಸರಿನಲ್ಲಿ ಕಟ್ಟಡ ರಚನೆ, ಸ್ಮಶಾನ ಅಭಿವೃದ್ಧಿ ಇತ್ಯಾದಿ ಸೌಲಭ್ಯಗಳು ಖಾತ್ರಿ ಯೋಜನೆಯಲ್ಲಿವೆ.
- ಸಾಬ್ಜನ ಇಟಗಿ