ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗ್ಯಾಸ್ ತುಟ್ಟಿ: ಬಿಜೆಪಿ ಯುವಮೋರ್ಚಾ ಪ್ರತಿಭಟನೆ

Lingaraj Badiger
Updated On : 4 Jan 2014, 11:25 am

ಹಾವೇರಿ: ಅಡುಗೆ ಅನಿಲ ಹಾಗೂ ಆಟೋ ಗ್ಯಾಸ್ ದರ ಏರಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.
ಅಧ್ಯಕ್ಷ ಪ್ರದೀಪ ಮುಳ್ಳೂರ ಮಾತನಾಡಿ, ಅಡುಗೆ ಅನಿಲ ಸಿಲಿಂಡರ್ ದರ ರು. 220 ಏರಿಕೆಯಾಗಿದ್ದು, ಆಟೋ ಗ್ಯಾಸ್ ದರದಲ್ಲಿ ಕೆಜಿಗೆ ರು. 11.30 ಹೆಚ್ಚಳವಾಗಿದೆ. ಬಡ ಹಾಗೂ ಮಧ್ಯಮ ವರ್ಗದವರ ಹೊಟ್ಟೆಯ ಮೇಲೆ ಕಾಂಗ್ರೆಸ್ ಸರ್ಕಾರ ಬರೆ ಎಳೆದಿದೆ. ತೈಲ ಕಂಪನಿಗಳ ಮಾಫಿಯಾಗೆ ಅಂಜಿ, ಅವರ ಆಮಿಷಕ್ಕೆ ಒಳಗಾಗಿ ಕೇಂದ್ರ ಇಂಧನ ಸಚಿವ ಹಾಗೂ ಪ್ರಧಾನ ಮಂತ್ರಿ ಬಡ, ಮಧ್ಯಮ ವರ್ಗದವರ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಸಬ್ಸಿಡಿ ಹಣವನ್ನು ನೇರವಾಗಿ ಖಾತೆಗೆ ಸಂದಾಯ ಮಾಡುವ ಉದ್ದೇಶ ಅರ್ಥವಾಗದಂತೆ ದರ ಹೆಚ್ಚಿಸಿರುವುದು ಹೇಡಿತನ ಎಂದು ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಐದು ವರ್ಷಗಳಲ್ಲಿ ಕೇವಲ 3 ಬಾರಿ ಇಂಧನ ಬೆಲೆ ಹೆಚ್ಚಿಸಲಾಗಿತ್ತು. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 30ಕ್ಕಿಂತ ಹೆಚ್ಚು ಬಾರಿ ತೈಲ ಹಾಗೂ ಅನಿಲ ಬೆಲೆ ಏರಿಸಿದೆ. ಮುಂದೆ ಜನರೇ ಇವರಿಗೆ ಪಾಠ ಕಲಿಸಲಿದ್ದಾರೆ ಎಂದರು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮೇಶ್ವರ ಕುರ್ಡೇಕರ, ಶಿವನಗೌಡ ನಿಂಗನಗೌಡ್ರ, ವೆಂಕಟೇಶ ದೈವಜ್ಞ, ಮಂಜುನಾಥ ನಿಂಗನಗೌಡ್ರ, ವಿನಯ ಪಾಟೀಲ, ಮಧುಕರ ನವಲೆ, ಗಣೇಶ ಭದ್ರಶೆಟ್ಟಿ, ಚೇತನ ಕುರುಬಗೊಂಡ, ಲಕ್ಷ್ಮಣ ರಜಪೂತ, ಇಮಾಮಸಾಬ ಹಿರೇಮುಗದೂರ, ಈರಣ್ಣ ಕಾರಡಗಿ, ಎಂ.ಎಸ್. ಕಡಕೋಳ, ರಾಕೇಶ ಗಾಜಿ, ಯಲ್ಲಪ್ಪ ಬಡಿಗೇರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement