ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ: ಈಶ್ವರಪ್ಪ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 3
ಅನಿಲ್ ಲಾಡ್‌ಗಿಂತ ಹೆಚ್ಚು ಕಳಂಕ ಹೊತ್ತಿರುವ ಡಿ.ಕೆ. ಶಿವಕುಮಾರ್ ಹಾಗೂ ರೋಶನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮಾಡಿ ಸಿದ್ದರಾಮಯ್ಯನವರ ಸ್ವಾಭಿಮಾನಕ್ಕೆ ರಾಹುಲ್ ಗಾಂಧಿಯವರೇ ಕೊಡಲಿ ಪೆಟ್ಟು ನೀಡಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು.
ನಗರಕ್ಕೆ ಶುಕ್ರವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗ ಕಳಂಕ ಹೊತ್ತಿರುವ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಯಡಿಯೂರಪ್ಪ ವಿರುದ್ಧ ಹೋರಾಟ ನಡೆಸಿ, ನೈತಿಕತೆ ಪ್ರಶ್ನಿಸುತ್ತಿದ್ದ ಅವರು ಈಗ ಜನರಿಗೆ ಏನು ಉತ್ತರ ಹೇಳುತ್ತಾರೆ? ಯಡಿಯೂರಪ್ಪ ಮೇಲೆ ಆರೋಪ ಬಂದಾಗ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದರು. ಲಾಡ್ ವಿರುದ್ಧ ಆರೋಪ ಕೇಳಿಬಂದಾಗ ಅವರಿಂದ ರಾಜಿನಾಮೆ ಪಡೆದುಕೊಂಡು, ಈಗ ಅವರಿಗಿಂತ ಹೆಚ್ಚು ಆರೋಪ ಎದುರಿಸುತ್ತಿರುವವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಕಳಂಕಿತ ಸಚಿವರನ್ನು ಕೈಬಿಡುವಂತೆ ಆಗ್ರಹಿಸಿ ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿ ಜ. 8ರಂದು ಪ್ರತಿಭಟನೆ ನಡೆಸಲಿದೆ ಎಂದರು.
ಬೆಲೆ ಏರಿಕೆ ವಿರುದ್ಧ 6ರಂದು ಪ್ರತಿಭಟನೆ
ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಭಟನೆಗೆ ಜನರನ್ನು ಪ್ರಚೋದಿಸುತ್ತಿದೆ. ಏಕಾಏಕಿ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ವಿಪರೀತ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಬೆಲೆ ಏರಿಕೆಗೆ ಜನ ಹೊಂದಿಕೊಂಡಿದ್ದಾರೆ ಎಂದು ಕಾಂಗ್ರೆಸ್ ತಿಳಿದಿದೆ. ಆದರೆ, ಪಕ್ಷ ಇದನ್ನು ಖಂಡಿಸುತ್ತದೆ. ಜ. 6ರಂದು ಬಿಜೆಪಿ ಮಹಿಳಾ ಮೋರ್ಚಾದಿಂದ ಎಲ್ಲ ಜಿಲ್ಲೆಗಳಲ್ಲಿ ಬೆಲೆ ಇಳಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು. ಸಿಲಿಂಡರ್ ಬೆಲೆ ಇಳಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.
ಶ್ರೀರಾಮುಲು ಸೇರಬೇಕು
ಯಡಿಯೂರಪ್ಪ ಬಿಜೆಪಿಗೆ ಮರಳಿ ಬರಬೇಕು ಎಂಬುದು ಎಲ್ಲ ಕಾರ್ಯಕರ್ತರ ಆಶಯವಾಗಿತ್ತು. ಅದರಂತೆ ಈಗ ಯಾವ ಷರತ್ತೂ ಇಲ್ಲದೆ ಯಡಿಯೂರಪ್ಪ ಹಾಗೂ ಕೆಜೆಪಿಯಲ್ಲಿದ್ದವರೆಲ್ಲ ಬಿಜೆಪಿ ಸೇರುತ್ತಿದ್ದಾರೆ. ಶ್ರೀರಾಮುಲು ಅವರೂ ಪಕ್ಷಕ್ಕೆ ಮರಳಬೇಕು ಎಂಬುದು ಎಲ್ಲರ ಅಭಿಪ್ರಾಯ. ಇದನ್ನು ಕೇಂದ್ರದ ನಾಯಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಯಡಿಯೂರಪ್ಪಗೆ ಪಕ್ಷದಲ್ಲಿ ಯಾವ ಸ್ಥಾನಮಾನ ನೀಡಲಾಗುತ್ತಿದೆ ಎಂದು ಕೇಳಿದಾಗ, ಹುಲಿ ಎಲ್ಲಿದ್ದರೂ ಹುಲಿಯೇ. ಅವರಿಗೆ ಸ್ಥಾನಮಾನ ತಾನಾಗೇ ಸಿಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಯಡಿಯೂರಪ್ಪ ಪಕ್ಷಕ್ಕೆ ಬಂದಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಶಕ್ತಿ ಇಮ್ಮಡಿಯಾಗಲಿದೆ. ಲೋಕಸಭೆ ಚುಲಾವಣೆಯಲ್ಲಿ ಗೆಲವು ನಮ್ಮದು ಎಂಬ ವಿಶ್ವಾಸ ಬಂದಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಸುರೇಶಗೌಡ್ರು, ಸಿದ್ದರಾಜ ಕಲಕೋಟಿ, ಪ್ರಭು ಹಿಟ್ನಳ್ಳಿ ಇದ್ದರು.