ಸಿಎಂ ಸ್ವಾಗತಕ್ಕೆ ಸಿದ್ಧತೆ
ಹಿರೇಕೆರೂರು: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜ. 4ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣವೆಲ್ಲ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಮುಖ್ಯ ಬೀದಿಯಲ್ಲಿ ಸರ್ವಜ್ಞ ವೃತ್ತದಿಂದ ಜಿ.ಬಿ. ಶಂಕರ ರಾವ್ ವೃತ್ತದ ವರೆಗೂ ಕಾಂಗ್ರೆಸ್ ಮುಖಂಡರ ಕಟೌಟ್‌ಗಳು, ಭಿತ್ತಿಪತ್ರಗಳು ರಾರಾಜಿಸುತ್ತಿವೆ. ಪಟ್ಟಣದ ಹೃದಯ ಭಾಗದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಮುಖ್ಯ ಸಮಾರಂಭದ ಅಲಂಕೃತ ವೇದಿಕೆ ಸಜ್ಜುಗೊಂಡಿದೆ. ಸಮೀಪದ ಬಸಲಿಹಳ್ಳಿ ಗ್ರಾಮದ ಹೊರವಲಯದಲ್ಲಿ ಹೆಲಿಪ್ಯಾಡ್ ನಿರ್ಮಾಣಗೊಂಡಿದ್ದು, ಪಟ್ಟಣಕ್ಕೆ ಬರುವ ರಸ್ತೆಯಲ್ಲಿದ್ದ ತಗ್ಗು-ಗುಂಡಿಗಳನ್ನು ಡಾಂಬರ್‌ನಿಂದ ಮುಚ್ಚಲಾಗಿದೆ. ಇದನ್ನು ಲೋಕೋಪಯೋಗಿ ಇಲಾಖೆ ಪೂರೈಸಿದೆ.
ಕಣ್ಗಾವಲು: ಮುಖ್ಯಮಂತ್ರಿ, ಹಲವು ಸಚಿವರು, ರಾಜಕೀಯ ಗಣ್ಯರು ಪಾಲ್ಗೊಳ್ಳುವ ಕಾರ್ಯಕ್ರಮದ ಬಂದೋಬಸ್ತ್‌ಗಾಗಿ ಬಾರಿ ಸಂಖ್ಯೆಯಲ್ಲಿ ಪೊಲೀಸರೂ ಬೀಡು ಬಿಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ಕಾರ್ಯಕರ್ತರು ಎಡೆ ಬಿಡದೆ ಕೆಲಸದಲ್ಲಿ ತೊಡಗಿರುವಂತೆಯೇ ಐಜಿಪಿ, ಎಸ್ಪಿ ಶಶಿಕುಮಾರ್ ನೇತೃತ್ವದಲ್ಲಿ ಭದ್ರತೆಗಾಗಿ ಒಬ್ಬರು ಹೆಚ್ಚುವರಿ ಪೊಲೀಸ್ ಅಧಿಕಾರಿ, ಐವರು ಡಿವೈಎಸ್ಪಿ, 14 ಸಿಪಿಐ, 30 ಪಿಎಸ್‌ಐ, 37 ಎಎಸ್‌ಐ, 480 ಪೇದೆಗಳು, 5 ಡಿಆರ್ ತುಕಡಿಗಳು ಹಾಗೂ 2 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.