ಹಾಸ್ಯದಿಂದ ಬದುಕು ಹಸನು: ಕುಲಕರ್ಣಿ
ಶಿಗ್ಗಾಂವಿ: ಬದುಕಿನಲ್ಲಿ ನಾವು ಕೋಶ ಓದದಿದ್ದರೆ, ದೇಶ ಸುತ್ತದಿದ್ದರೆ ಅನೇಕ ಸಂದಿಗ್ಧಗಳಿಗೆ ಒಳಗಾಗಬೇಕಾಗುತ್ತದೆ ಎಂದು ನರೆಗಲ್ಲಿನ ಹಾಸ್ಯ ಸಾಹಿತಿ ಅರುಣ ಬಿ. ಕುಲಕರ್ಣಿ ಅಭಿಪ್ರಾಯಪಟ್ಟರು.
ಶ್ರೀಮಂತ ಮಾಮ್ಲೆದೇಸಾಯಿ ಪಪೂ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಹಾಸ್ಯ ಪ್ರವೃತ್ತಿಯಿಂದ ಬದುಕು ಹಸನಾಗುವುದಲ್ಲದೆ ಸಾಧನೆಯ ಮೈಲುಗಲ್ಲು ತಲುಪಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಓದುವ ಹವ್ಯಾಸವನ್ನು ಬೆಳಸಿಕೊಳ್ಳುವ ಮೂಲಕ ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳಗಬೇಕು ಎಂದರು.
ಎಂ.ಬಿ. ಅಂಕಲಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂದೆ-ತಾಯಿ ಹಾಗೂ ಗುರುವಿನ ಶಕ್ತಿಯ ಮಹತ್ವ ವಿವರಿಸಿದರು.
ರಾಜಣ್ಣ ಬಿ. ಮಾಮ್ಲೆದೇಸಾಯಿ ವಿದ್ಯಾರ್ಥಿಗಳು ಬರೆದ 'ಪ್ರಕಾಶ' ಮತ್ತು 'ಕಿಶೋರ' ಹಸ್ತಪತ್ರಿಕೆ ಬಿಡುಗಡೆ ಮಾಡಿದರು. ಶಂಕರಗೌಡ್ರ ಪಾಟೀಲ ಉದ್ಘಾಟಿಸಿದರು. ವಸ್ತು, ರಂಗೋಲಿ, ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆರ್.ಸಿ. ಸಂಶಿ, ಎನ್.ಸಿ. ಹಿರೇಮಠ, ಎಸ್.ಪಿ. ಜೋಷಿ ಇದ್ದರು. ಪಲ್ಲವಿ ದುಂದೂರ ಪ್ರಾರ್ಥಿಸಿದರು. ಉಪಪ್ರಾಚಾರ್ಯ ಜಿ.ಎನ್. ಎಲಿಗಾರ ಸ್ವಾಗತಿಸಿದರು. ಬಿ.ಎಚ್. ಬಣಕಾರ ಪರಿಚಯಿಸಿದರು. ಎಸ್.ಬಿ. ಹರ್ಲಾಪುರ ನಿರೂಪಿಸಿದರು. ಬಿ.ಡಿ. ಚಾರಿ ವಂದಿಸಿದರು.