ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಂಗವಿಕಲರಿಗೆ ಸಿಗದ ಸಹಾಯಧನ: ಆಕ್ರೋಶ

Rashmi Kasaragodu
Updated On : 5 Jan 2014, 1:19 am

ಶಿರಹಟ್ಟಿ: ಅಂಗವಿಕಲರಿಗೆ ಶೈಕ್ಷಣಿಕ, ವೈದ್ಯಕೀಯ, ಕ್ರೀಡೆ ಅವರ ಶ್ರೇಯೋಭಿವೃದ್ಧಿಗಾಗಿ ಗ್ರಾಪಂಗೆ  ಬಂದ ಅಭಿವೃದ್ಧಿ ಅನುದಾನದಲ್ಲಿ ಶೇ. 3ರಷ್ಟು ಹಣವನ್ನು ಫಲಾನುಭವಿಗಳಿಗೆ ನೀಡಬೇಕೆಂಬ ಸರ್ಕಾರದ ಆದೇಶವಿದ್ದರೂ ಪಂಚಾಯಿತಿ ಪಿಡಿಒ ಆರ್.ಎಂ. ಮಾದರಗೆ ಮನವಿ ಸಲ್ಲಿಸಿದರೂ ನೀಡುತ್ತಿಲ್ಲ ಎಂದು ವಿಠ್ಠಲಗೌಡ ಪಾಟೀಲ ಆರೋಪಿಸಿದರು. ರಣತೂರ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಜರುಗಿದ ಜನಸಂಪರ್ಕ ಸಭೆಯಲ್ಲಿ ಗಂಭೀರ ಆರೋಪ ಮಾಡಿದ ಅವರು, ಗ್ರಾಮದಲ್ಲಿ 20ಕ್ಕೂ ಹೆಚ್ಚು ಅಂಗವಿಕಲ ಫಲಾನುಭವಿಗಳಿದ್ದು, 6 ತಿಂಗಳ ಹಿಂದೆಯೇ ಗ್ರಾಮಸಭೆಯಲ್ಲಿ ಶೇ. 3ರ ಸಹಾಯಧನ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ ಪಿಡಿಒ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಗ್ರಾಮದಲ್ಲಿ ಪಡಿತರ (ರೇಷನ್) ವಿತರಕರು ಸರಿಯಾಗಿ ಸೀಮೆ ಎಣ್ಣೆ ನೀಡುತ್ತಿಲ್ಲ. ಒಂದೆರಡು ದಿನಗಳಲ್ಲೇ ಖಾಲಿಯಾಗಿದೆ ಎನ್ನುತ್ತಾರೆ. ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಆಹಾರ ನಿರೀಕ್ಷಕರ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಎಚ್ಚರಪ್ಪ ಬಳ್ಳಾರಿ ಆರೋಪಿಸಿದರು. ಪಿಡಿಒ ಆರ್.ಎಂ. ಮಾದರ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವರ್ಷದ ಹಿಂದೆಯೇ ಸ್ವಂತ (ಮಾಲ್ಕಿ) ಖುಲ್ಲಾ ಜಾಗೆಯ (ಪ್ಲಾಟಿನ) ಉತಾರ ನೀಡುವಂತೆ ಎಲ್ಲ ಮೂಲ ದಾಖಲೆ ಹಾಗೂ ಈ ಹಿಂದೆ ಗ್ರಾಪಂನಲ್ಲೇ ಠರಾವು ಮಾಡಿದ ಪ್ರತಿಯನ್ನು ಲಗತ್ತಿಸಿ ಅರ್ಜಿ ಸಲ್ಲಿಸಿದ್ದರೂ ಪರಿಶೀಲನೆ ನಡೆಸಿ ಉತಾರ ನೀಡುತ್ತಿಲ್ಲ. ಸದ್ಯ ನಮ್ಮ ಜಾಗೆಯಲ್ಲಿ ಬೇರೊಬ್ಬರು ವಾಸ ಮಾಡುತ್ತಿದ್ದು, ಸಂಘರ್ಷಕ್ಕೆ ಮುಂದಾಗಿದ್ದಾರೆ.  ತುರ್ತಾಗಿ ಉತಾರ ನೀಡುವಂತೆ ಎಚ್ಚರಪ್ಪ ಬಳ್ಳಾರಿ ಮನವಿ ನೀಡಿದರು. ರಣತೂರ ಗ್ರಾಪಂ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ರು. 80 ಲಕ್ಷ ಅನುದಾನವನ್ನು ಕ್ರಿಯಾ ಯೋಜನೆಯಲ್ಲಿ ತೆಗೆದಿರಿಸಿದ್ದು, ಕೇವಲ ರು. 12 ಲಕ್ಷ ಖರ್ಚಾಗಿದೆ. ಮಾರ್ಚ್ ಒಳಗೆ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ತಾಪಂ ಇಒ ವೈ.ಎಲ್. ಹಂಪಣ್ಣ ಸೂಚಿಸಿದರು. ಗ್ರಾಪಂ ಅಧ್ಯಕ್ಷೆ ಕಮಲಮ್ಮ ಕಾಶಣ್ಣವರ ಉದ್ಘಾಟಿಸಿದರು. ಉಪಾಧ್ಯಕ್ಷೆ ಕಮಲಮ್ಮ ಪೂಜಾರ, ಸದಸ್ಯ ಮಂಜುನಾಥಗೌಡ ಪಾಟೀಲ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಾಂತೇಶ ಸ್ವಾಗೀಹಾಳ, ಹನುಮಂತಪ್ಪ ಗೋಪಾಳಿ, ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ, ಜಿ.ಪಂ. ಜೆ.ಆರ್. ಹೆಗಡೆ, ಸಮಾಜ ಕಲ್ಯಾಣ ಇಲಾಖೆಯ ಬಿ.ಎನ್. ರಾಟಿ, ಸಿಡಿಪಿಒ ಎಸ್.ಕೆ. ಹೊನ್ನೆಗೌಡರ, ತಾಲೂಕು ವೈದ್ಯಾಧಿಕಾರಿ ಶ್ರೀಕಾಂತ ಕಾಟೆವಾಲೆ ಇದ್ದರು. ಮುಖ್ಯೋಪಾಧ್ಯಾಯ ವಿ.ಜಿ. ಅಂಗಡಿ ಸ್ವಾಗತಿಸಿದರು. ಎಚ್.ಎಸ್. ಜಕ್ಕಲಿ ನಿರೂಪಿಸಿ ವಂದಿಸಿದರು.
ಮಕ್ಕಳ ಪಾದಯಾತ್ರೆ
ನರೇಗಲ್ಲ:  2014ರ ಮಾರ್ಚ್ನಲ್ಲಿ ಜರುಗುವ ಅನ್ನದಾನ ಶ್ರೀಗಳ ಪುಣ್ಯಾರಾಧನೆ ಶತಮಾನೋತ್ಸವ ಹಾಗೂ ಜ. 6ರಿಂದ ಪ್ರಾರಂಭವಾಗುವ 101 ಚಕ್ಕಡಿ ಉಳವಿ ಯಾತ್ರೆ ಮತ್ತು ವಿದ್ಯಾರ್ಥಿಗಳ 2014ರ ವಾರ್ಷಿಕ ಪರೀಕ್ಷೆಯ ಅಭೂತಪೂರ್ವ ಯಶಸ್ಸಿಗೆ ಅನ್ನದಾನೀಶ್ವರರಲ್ಲಿ ಪ್ರಾರ್ಥಿಸುವ ಸಲುವಾಗಿ ಪಟ್ಟಣದಲ್ಲಿರುವ ಅನ್ನದಾನೀಶ್ವರ ಪಪೂ ಕಾಲೇಜಿನ ಪ್ರಥಮ, ದ್ವಿತೀಯ ಪಿಯು ವಿದ್ಯಾರ್ಥಿಗಳು, ಪ್ರಾಚಾರ್ಯರು ಹಾಗೂ ಉಪನ್ಯಾಸಕರು ನರೇಗಲ್ಲನ ಕಾಲೇಜಿನಿಂದ ಹಾಲಕೇರಿ ಅನ್ನದಾನೀಶ್ವರ ಮಠಕ್ಕೆ ಪಾದಯಾತ್ರೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement