ಸಂಪುಟದಲ್ಲಿ ಕಳಂಕಿತ ಸಚಿವರಿಲ್ಲ
ಹಾವೇರಿ: ರಾಜ್ಯ ಸಚಿವ ಸಂಪುಟದಲ್ಲಿ ಯಾರೂ ಕಳಂಕಿತರಿಲ್ಲ. ಸಂತೋಷ ಲಾಡ್ ಕೂಡ ಕಳಂಕಿತರು ಎಂಬ ಕಾರಣಕ್ಕೆ ರಾಜಿನಾಮೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿರೇಕೆರೂರು ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ ಲಾಡ್ ಸ್ವಯಂಪ್ರೇರಿತರಾಗಿ ರಾಜಿನಾಮೆ ನೀಡಿದ್ದಾರೆ. ಅವರನ್ನು ಕಳಂಕಿತ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ ಅಷ್ಟೇ. ಡಿ.ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ ಕಳಂಕಿತರಲ್ಲ. ಡಿಕೆಶಿ ವಿರುದ್ಧ ಡಿನೋಟಿಫೈ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿತ್ತು. ಇಷ್ಟಕ್ಕೇ ಅವರು ಕಳಂಕಿತರಾಗುವುದಿಲ್ಲ. ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಹುಲ್ಗಾಂಧಿ ಅವರಿಂದ ಸಿದ್ದರಾಮಯ್ಯ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತಿದೆ ಎಂಬ ಈಶ್ವರಪ್ಪನವರ ಹೇಳಿಕೆ ಕುರಿತು ಕೇಳಿದಾಗ, ಈಶ್ವರಪ್ಪ ಜನರಿಂದ ತಿರಸ್ಕೃತಗೊಂಡಿದ್ದಾರೆ. ಈ ಹತಾಶೆಯಲ್ಲಿ ಪೆದ್ದುಪೆದ್ದಾಗಿ ಮಾತನಾಡುತ್ತಾರೆ. ಅವರ ಹೇಳಿಕೆಗಳಿಗೆ ಉತ್ತರಿಸುವುದನ್ನೇ ಬಿಟ್ಟಿದ್ದೇನೆ ಎಂದು ಪ್ರತಿಕ್ರಿಯಿಸಿದರು. ನಿಗಮ, ಮಂಡಳಿಗಳಿಗೆ ನೇಮಕ ಕುರಿತು ಕೇಳಿದಾಗ, ಸದ್ಯ ತಾಲೂಕು, ಜಿಲ್ಲಾ ಮಟ್ಟದ ಸಮಿತಿಗಳಿಗೆ ನಾಮನಿರ್ದೇಶನ ಮಾಡಲಾಗುತ್ತಿದೆ. ಇದಾದ ಮೇಲೆ ನಿಗಮ, ಮಂಡಳಿಗಳಿಗೆ ನೇಮಕ ಆಗಲಿದೆ ಎಂದರು. ಹೊಸ ಮರಳು ನೀತಿ ಜಾರಿಗೆ ತರಲಾಗಿದ್ದು, ಮರಳು ಲಾರಿ ಮಾಲೀಕರು ವಿನಾಕಾರಣ ತಪ್ಪು ಕಲ್ಪನೆ ಹೊಂದಿದ್ದಾರೆ. ಅವರು ಮುಷ್ಕರ ಹಮ್ಮಿಕೊಳ್ಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕಾನೂನು ಜಾರಿಗೆ ಸರ್ಕಾರ ಬದ್ಧವಾಗಿದೆ. ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದ್ದು, ಮರಳು ಸಮಸ್ಯೆ ಆಗುವುದಿಲ್ಲ ಎಂದರು.
ಕಳೆದ ಬಜೆಟ್ನಲ್ಲಿ 6 ಹೊಸ ಮೆಡಿಕಲ್ ಕಾಲೇಜಿಗೆ ಅನುಮತಿ ನೀಡಲಾಗಿದೆ. ಮುಂದಿನ ಬಜೆಟ್ನಲ್ಲಿ ಹಾವೇರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗುವುದು. ಕಾಗಿನೆಲೆ ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ. ಕಾಮಗಾರಿ ಕೈಗೊಳ್ಳಲು ಪ್ರಾಧಿಕಾರದ ಬಳಿ ಇನ್ನೂ ರು. 15 ಕೋಟಿ ಇದೆ. ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ಧವಿದೆ. ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್ ಆಗಬೇಕೆಂಬ ಬೇಡಿಕೆಯಿದೆ. ಈ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಸಚಿವರಾದ ಪ್ರಕಾಶ ಹುಕ್ಕೇರಿ, ಶಾಮನೂರು ಶಿವಶಂಕರಪ್ಪ, ಶಾಸಕ ಕೆ.ಬಿ. ಕೋಳಿವಾಡ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಮಾಜಿ ಶಾಸಕ ಬಿ.ಸಿ. ಪಾಟೀಲ, ಅಜ್ಜಂಪೀರ ಖಾದ್ರಿ ಇದ್ದರು.