ಎಸ್ಸಿ, ಎಸ್ಟಿ ಕಾಲನಿ ಅಭಿವೃದ್ಧಿಗೆ ಯೋಜನೆ: ತಹಶೀಲ್ದಾರ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜ. 5
ಗ್ರಾಮೀಣ ಭಾಗದ ಎಸ್ಸಿ-ಎಸ್ಟಿ ಕಾಲನಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಬಾಳಂಬೀಡ ಗ್ರಾಮಕ್ಕೆ ರು. 36 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಪಕ್ಕಾ ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ಮನೋಹರ ತಹಶೀಲ್ದಾರ ತಿಳಿಸಿದರು.
ತಾಲೂಕಿನ ಬಾಳಂಬೀಡ-ಮನೋಹರ ನಗರದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆ ಈ ಬಡಾವಣೆ ಅವ್ಯವಸ್ಥೆಯ ಆಗರವಾಗಿತ್ತು. ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಇಲ್ಲಿಗೆ ಮೂಲಸೌಲಭ್ಯ ಒದಗಿಸಲಾಗಿತ್ತು. ಚುನಾವಣೆಯಲ್ಲಿ ಭರವಸೆ ನೀಡಿದಂತೆ ಈಗ ಸರ್ವಋತು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ರು. 30 ಲಕ್ಷ ವೆಚ್ಚದಲ್ಲಿ ಮೂರು ಕಡೆ ಕಾಮಗಾರಿ ನಡೆಯಲಿದೆ. ಕಾಮಗಾರಿ ಕಳಪೆಯಾಗದಂತೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ನಿಗಾ ವಹಿಸಬೇಕು. ಪರಿಶಿಷ್ಟ ಜಾತಿ ಸಮುದಾಯಗಳ ಕಾಲನಿಗಳ ಅಭಿವೃದ್ಧಿಗೆ ರು. 1 ಕೋಟಿ, ಪರಿಶಿಷ್ಟ ಪಂಗಡಗಳ ಕಾಲನಿಗಳ ಅಭಿವೃದ್ಧಿಗೆ ರು. 50 ಲಕ್ಷ ಅನುದಾನ ನೀಡಲಾಗುತ್ತಿದೆ. ಮನೋಹರ ನಗರಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಸಮುದಾಯ ಭವನ ನಿರ್ಮಿಸುವುದಾಗಿ ಭರವಸೆ ನೀಡಿದರು.
ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ವೈ. ಭಂಡಿವಡ್ಡರ ಪ್ರಾಸ್ತಾವಿಕ ಮಾತನಾಡಿ, ಎಸ್‌ಸಿಪಿ ಯೋಜನೆಯಡಿ ರು. 30 ಲಕ್ಷ ಅನುದಾನದಲ್ಲಿ ಗುಣಮಟ್ಟದ ಸರ್ವಋತು ರಸ್ತೆ, ಚರಂಡಿ ನಿರ್ಮಿಸಲಾಗುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಗುಣಮಟ್ಟದ ಕಾಮಗಾರಿಗೆ ಸಾರ್ವಜನಿಕರ ಸಹಕಾರ ಅವಶ್ಯ ಎಂದರು.
ಗ್ರಾಪಂ ಅಧ್ಯಕ್ಷ ಶಿವಪ್ಪ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಜಿಪಂ ಸದಸ್ಯ ಮಹದೇವಪ್ಪ ಭಾಗಸರ, ತಾಪಂ ಸದಸ್ಯರಾದ ರಾಜೇಂದ್ರ ಬಾರ್ಕಿ, ವಿಜಯಾ ಹಿರೇಮಠ, ಕಲವೀರಪ್ಪ ಪವಾಡಿ, ಗ್ರಾಪಂ ಉಪಾಧ್ಯಕ್ಷ ಗುತ್ತೆಪ್ಪ ಹೊಸೂರ, ಯಲ್ಲಪ್ಪ ದುಂಡಣ್ಣನವರ, ಮಂಜು ಪಾಟೀಲ, ದೇವಪ್ಪ ಕತ್ತಿ, ಮಂಜುನಾಥ ತಡಸದ, ಶಂಬು ನೆಗಳೂರ, ಮಾರುತಿ ದೇಸೂರ, ಮಂಜು ಕಳಸದ, ಗಿರೀಶಗೌಡ ಪಾಟೀಲ, ಅಭಿಯಂತ ಮಹಾಬಳೇಶ್ವರ ಉಪಸ್ಥಿತರಿದ್ದರು. ಶಿವಕುಮಾರ ಹೇರೂರ ನಿರೂಪಿಸಿದರು.