ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದೊರೆ ಬಂದರೂ ದೊರೆತದ್ದು ಶೂನ್ಯ

Lingaraj Badiger
Updated On : 6 Jan 2014, 12:36 pm

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 5
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದವು. ಆದರೆ, ಕಳಪೆ ಹತ್ತಿ ಬೀಜದಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ, ಸರ್ವಜ್ಞ ಪ್ರಾಧಿಕಾರಕ್ಕೆ ಅನುದಾನ, ಜಿಲ್ಲೆಗೆ ಮಂತ್ರಿ ಸ್ಥಾನ ಸೇರಿದಂತೆ ಯಾವುದರ ಬಗ್ಗೆಯೂ ಚಕಾರವೆತ್ತದೆ, ರಾಜಕೀಯ ಆರೋಪಗಳಿಗೆ ಮಾತ್ರ ಭೇಟಿ ಸೀಮಿತಗೊಳಿಸಿ ಜನರ ನಿರೀಕ್ಷೆ ಹುಸಿಯಾಗಿಸಿದರು.
ನಾಡ ದೊರೆ ಭೇಟಿ ಜಿಲ್ಲೆಯ ಜನರಲ್ಲಿ ಹಲವು ನಿರೀಕ್ಷೆ ಗರಿಗೆದರುವಂತೆ ಮಾಡಿತ್ತು. ಶನಿವಾರ ಹಿರೇಕೆರೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಹಾಗೂ ಕಾಂಗ್ರೆಸ್ ಕಾರ್ಯರ್ಕತರಿಂದ ಅಭಿನಂದನೆ ಸ್ವೀಕರಿಸಲು ಸಿದ್ದರಾಮಯ್ಯ ಆಗಮಿಸಿದ್ದರು. ಮುಖ್ಯಮಂತ್ರಿಗಳು ಜಿಲ್ಲೆಗೆ ಬರುತ್ತಾರೆ ಎಂದರೆ ಏನಾದರೂ ಹೊಸ ಘೋಷಣೆ, ಅನುದಾನ ಬಿಡುಗಡೆ, ಅಭಿವೃದ್ಧಿ ಯೋಜನೆಗಳಿಗೆ ಒಪ್ಪಿಗೆ ನೀಡುವುದು ವಾಡಿಕೆ. ಸಿದ್ದರಾಮಯ್ಯ ಅವರೂ ಹಾವೇರಿಗೆ ಏನಾದರೂ ಕೊಡುಗೆ ನೀಡುತ್ತಾರೆ ಎಂಬ ನಿರೀಕ್ಷೆ ಜನರಲ್ಲಿತ್ತು. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಹೇಳಿದರೆ, ಕಾರ್ಯಕರ್ತರ ಸಮಾವೇಶ ಕೇವಲ ಪ್ರತಿಪಕ್ಷಗಳ ಮೇಲೆ ವಾಗ್ದಾಳಿಗೆ ಸೀಮಿತವಾಗಿತ್ತು.
ರೈತರಿಗೆ ಸ್ಪಂದಿಸಲಿಲ್ಲ
ಜಿಲ್ಲೆಯಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಳಪೆ ಹತ್ತಿ ಬೀಜದಿಂದ ನಷ್ಟವಾಗಿದೆ. ಬೆಳೆಗೆ ಸೂಕ್ತ ಬೆಲೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕಳಪೆ ಬಿಟಿ ಹತ್ತಿ ಬೀಜ ಬಿತ್ತಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಕಾಯಿ ಕಟ್ಟಲಿಲ್ಲ. ಸಾವಿರಾರು ರೈತರು ಹಾನಿ ಅನುಭವಿಸಿ, ಪರಿಹಾರಕ್ಕೆ ನಿತ್ಯ ಹೋರಾಟ ನಡೆಸುತ್ತಿದ್ದಾರೆ. ಹಿರೇಕೆರೂರಿನಲ್ಲಿ ಸಿಎಂ ಕಾರ್ಯಕ್ರಮ ಸ್ಥಳದ ಸಮೀಪವೇ ರೈತರು ಧರಣಿ ನಿರತರಾಗಿದ್ದರು. ಆದರೆ ಯಾವುದೇ ಸ್ಪಷ್ಟ ಸೂಚನೆಯನ್ನೂ ನೀಡದೆ ಬೆಲೆ ಆಯೋಗ ರಚನೆ ಮಾಡಲಾಗುವುದು ಎಂದು ಹೇಳಿದರು. ರೈತರಿಗೆ ಶೀಘ್ರ ಪರಿಹಾರಕ್ಕಾದರೂ ಸೂಚಿಸಿದ್ದರೆ ಜಿಲ್ಲೆಗೆ ಸಿಎಂ ಬಂದಿದ್ದು ಸಾರ್ಥಕವಾಗುತ್ತಿತ್ತು ಎಂದು ರೈತರು ಅಭಿಪ್ರಾಯಪಡುತ್ತಿದ್ದಾರೆ.
ಸರ್ವಜ್ಞ ಪ್ರಾಧಿಕಾರದ ಮಾತಿಲ್ಲ
ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದ್ದು ಮುಖ್ಯವಾಗಿ ಮಾಜಿ ಶಾಸಕ ಬಿ.ಸಿ. ಪಾಟೀಲರ ಮನವಿ ಮೇರೆಗೆ. ಬಿ.ಸಿ. ಪಾಟೀಲ ಶಾಸಕರಾಗಿದ್ದಾಗ ವಿಧಾನಸಭೆಯಲ್ಲೇ ಸರ್ವಜ್ಞ ಪ್ರಾಧಿಕಾರಕ್ಕಾಗಿ ಧ್ವನಿ ಎತ್ತಿದ್ದರು. ಈಗಲೂ ಪ್ರಾಧಿಕಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ಶಾಸಕ ಯು.ಬಿ. ಬಣಕಾರ ಅವರೂ ಪ್ರಾಧಿಕಾರಕ್ಕೆ ಸದ್ಯಕ್ಕೆ ರು. 10 ಲಕ್ಷವನ್ನಾದರೂ ನೀಡಿ ಎಂಬ ಮನವಿ ನೀಡಿದ್ದರು. ಮುಖ್ಯಮಂತ್ರಿಗಳು ಮನಸ್ಸು ಮಾಡಿದರೆ ರು. 10 ಲಕ್ಷ ಅನುದಾನ ಘೋಷಣೆಗೆ ಯಾರನ್ನೂ ಕೇಳುವ ಅಗತ್ಯವಿಲ್ಲ. ಆದರೆ ಮನವಿಗೂ ಅವರು ಸ್ಪಂದಿಸಲೇ ಇಲ್ಲ.
ಮಂತ್ರಿಯೂ ಇಲ್ಲ: ಜಿಲ್ಲೆಯಿಂದ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ ಬೇರೆ ಜಿಲ್ಲೆಯವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಕೆಲ ಶಾಸಕರು ತಮ್ಮನ್ನು ಮಂತ್ರಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸಿಎಂ ಏನಾದರೂ ಮುನ್ಸೂಚನೆ ನೀಡಬಹುದು ಎಂಬ ಲೆಕ್ಕಾಚಾರವೂ ತಲೆಕೆಳಗಾಗಿದೆ. ಅಷ್ಟೇ ಅಲ್ಲ, ತಾನು ಜಿಲ್ಲೆಯ ಯಾರಿಗೂ ಮಂತ್ರಿ ಮಾಡುವುದಾಗಿ ಹೇಳಿಯೇ ಇಲ್ಲ ಎನ್ನುವ ಮೂಲಕ ಸಂಪುಟದಲ್ಲಿ ಸೇರಿಕೊಳ್ಳುವ ಜಿಲ್ಲೆಯ ಶಾಸಕರ ಕನಸನ್ನು ತಾತ್ಕಾಲಿಕವಾಗಿ ನುಚ್ಚುನೂರು ಮಾಡಿದರು. ಇದು ಪಕ್ಷದ ಕಾರ್ಯಕರ್ತರ ಮುನಿಸಿಗೂ ಕಾರಣವಾಗಿದೆ.
ಇನ್ನು ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಿ ಬಗ್ಗೆಯೂ ಹಲವು ವರ್ಷಗಳಿಂದ ಬೇಡಿಕೆಯಿದೆ. ಕಳೆದ ಬಜೆಟ್‌ನಲ್ಲೇ ಮೆಡಿಕಲ್ ಕಾಲೇಜು ಮಂಜೂರಾಗುತ್ತದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಈ ಕುರಿತು ಮಾಧ್ಯಮದವರು ಪ್ರಶ್ನೆ ಮಾಡಿದರೂ, ಸಮರ್ಪಕ ಉತ್ತರ ದೊರೆಯಲಿಲ್ಲ. ಮುಂದಿನ ಬಜೆಟ್‌ನಲ್ಲಿ ಮಾಡೋಣ ಎಂದಷ್ಟೇ ಹೇಳಿದರು. ನೋಡೋಣ, ಮಾಡೋಣ ಎಂಬಂಥ ಮಾತುಗಳಷ್ಟೇ ಮುಖ್ಯಮಂತ್ರಿ ಬಾಯಿಂದ ಬಂದವು. ಜಿಲ್ಲೆಗಾಗಿ ಯಾವ ಅಭಿವೃದ್ಧಿ ಯೋಜನೆಯನ್ನೂ ಘೋಷಿಸಲಿಲ್ಲ.
ರಾಜಕೀಯಕ್ಕಷ್ಟೇ ಸೀಮಿತ: ಸಿದ್ದರಾಮಯ್ಯ ಭೇಟಿಯನ್ನು ಅವರು ಬಳಸಿಕೊಂಡಿದ್ದು ವಿಪಕ್ಷಗಳ ವಿರುದ್ಧ ಆರೋಪ ಮಾಡಲು. ಮೋದಿ, ಯಡಿಯೂರಪ್ಪ, ಬಿಜೆಪಿ ವಿರುದ್ಧ ಟೀಕೆ ಮಾಡುತ್ತ ಪಕ್ಷದ ಕಾರ್ಯಕರ್ತರಿಗೆ ಖುಷಿ ನೀಡಿದರೇ ಹೊರತು ಬೇರೇನೂ ಪ್ರಯೋಜನವಾಗಲಿಲ್ಲ. ಇದರಿಂದ ಜಿಲ್ಲೆಯ ಜನರಿಗೆ ತೀವ್ರ ನಿರಾಸೆಯಾಗಿದೆ. ಕೊಡುಗೆಯ ನಿರೀಕ್ಷೆಯಲ್ಲಿದ್ದ ಜನರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಾವೇರಿ ಜಿಲ್ಲೆಯ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಗೊತ್ತಾಗಿದೆ ಎಂದು ಪರಶುರಾಮ ಅಗಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement