ಭಾವನೆ, ವಿಚಾರದಲ್ಲಿ ಹೊಸತನವಿರಲಿ: ಶ್ರೀ
ಹಾವೇರಿ: ಯಾವುದೇ ವಸ್ತು ನಿರಂತರವಾಗಿ ಹೊಸತಾಗಿರಲು ಸಾಧ್ಯವಿಲ್ಲ. ಸಹಜವಾಗಿ ಮಾನವ ಹೊಸತನವನ್ನು ಬಯಸುತ್ತಾನೆ. ಭಾವನೆ, ವಿಚಾರದಲ್ಲಿ ಹೊಸತನವಿರಬೇಕು. ಸದಾ ಹೊಸ ಆಲೋಚನೆ ಇರಬೇಕು. ಹೊಸ ವ್ಯಕ್ತಿಯಾಗಿ ಎದ್ದು ಬರಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಶರಣ ಸಂಗಮ ಹಾಗೂ ಶರಣ ಸಂಸ್ಕೃತಿ ಉತ್ಸವ-2014ರ ನಿಮಿತ್ತ ನಗರದ ಹೊಸಮಠದಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಫಲಭರಿತವಾದ ಬಾಳೆಯ ಗಿಡ ಒಮ್ಮೆ ಗೊನೆ ಬಂದ ತಕ್ಷಣ ಬದುಕು ಮುಕ್ತಾಯವಾಗುತ್ತದೆ. ಸತ್ಕಾರ್ಯ ಮಾಡಿದಂತಹ ವ್ಯಕ್ತಿ ನಿರಂತರತೆಯನ್ನು ಪಡೆಯುತ್ತಾನೆ. ಸಂಘ-ಸಂಸ್ಥೆಗಳನ್ನು ಅಭಿವೃದ್ಧಿ ಮಾಡುವ ಕೆಲಸವಾಗಬೇಕು ಎಂದರು.
ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕಾವೇರಿ ನದಿಯ ಮೂಲ ತಲಕಾವೇರಿಯಾದರೆ ಶರಣ ಸಂಸ್ಕೃತಿ ಉತ್ಸವದ ಮೂಲ ಹಾವೇರಿಯ ಹೊಸಮಠದಿಂದ ಪ್ರಾರಂಭವಾಯಿತು. ಶಿವಶರಣರು ಸಮಾಜದ ಅಭಿವೃದ್ಧಿಯ ಹರಿಕಾರರು ಎಂದರು.
ನಗರಸಭಾ ಅಧ್ಯಕ್ಷ ಐ.ಯು. ಪಠಾಣ ಮಾತನಾಡಿ, ಶರಣ ಸಂಗಮ ಕಾರ್ಯಕ್ರಮ ಸಮಾಜದ ಏರುಪೇರುಗಳನ್ನು ಸರಿದೂಗಿಸುತ್ತದೆ. ಶರಣರ ತತ್ವಾದರ್ಶಗಳನ್ನು ಜನತೆ ಅಳವಡಿಸಿಕೊಂಡಾಗ ಜಾಗೃತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ ಮಾತನಾಡಿ, ಶರಣ ಸಂಸ್ಕೃತಿ ಕಾರ್ಯಕ್ರಮ ಚಿಂತನಶೀಲ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು.
ಫೆಬ್ರುವರಿಯಲ್ಲಿ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷರನ್ನಾಗಿ ಸಂಜೀವಕುಮಾರ ನೀರಲಗಿ, ಕಾರ್ಯಾಧ್ಯಕ್ಷರನ್ನಾಗಿ ಗುಡ್ಡನಗೌಡ ಅಂದಾನಿಗೌಡ್ರ ಅವರನ್ನು ಆಯ್ಕೆಮಾಡಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಭಜಂತ್ರಿ ಅವರಿಂದ ಶಹನಾಯಿ ವಾದನ ನಡೆಯಿತು. ಲಕ್ಕಣ್ಣ ಸಹೋದರಿಯರು ವಚನ ಗಾಯನ ನಡೆಸಿಕೊಟ್ಟರು. ಜಲಾನಯನ ಇಲಾಖೆಯ ಮಂಜುನಾಥ, ಉಪ ನೋಂದಣಾಧಿಕಾರಿ ರಾಜೇಂದ್ರ ಸಜ್ಜನರ, ಕರಿಯಲ್ಲಪ್ಪ ಡಿ.ಕೆ., ಭಾರತಿ ಜಂಬಗಿ ಮುಂತಾದವರು ಪಾಲ್ಗೊಂಡಿದ್ದರು. ನಾಗೇಂದ್ರ ಕಟಕೋಳ ಸ್ವಾಗತಿಸಿದರು. ಹನುಮಂತಗೌಡ ಗೊಲ್ಲರ ನಿರೂಪಿಸಿದರು. ಎಸ್.ಎಸ್. ಬೇವಿನಮರದ ವಂದಿಸಿದರು.