ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗ್ಯಾಸ್ ತುಟ್ಟಿ: ಆಟೋ ಸ್ಥಗಿತ

Lingaraj Badiger
Updated On : 7 Jan 2014, 12:24 pm

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜ. 6
ಗ್ಯಾಸ್ ದರ ಇಳಿಕೆ ಮತ್ತಿತರ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕು ಆಟೋ ಚಾಲಕ-ಮಾಲೀಕರ ಸಂಘದ ಸದಸ್ಯರು ಸೋಮವಾರ ತಮ್ಮ ಸೇವೆ ಸ್ಥಗಿತಗೊಳಿಸಿ, ನಗರಸಭೆಗೆ ಮುತ್ತಿಗೆ ಹಾಕಿದರು.
ಕೆಇಬಿ ಗಣೇಶ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಆಟೋ ಚಾಲಕರು, ಕೇಂದ್ರ ಇಂಧನ ಸಚಿವರು ಹಾಗೂ ಪ್ರಧಾನಿ ವಿರುದ್ಧ ಘೋಷಣೆ ಕೂಗಿ, ತಹಸೀಲ್ದಾರ್ ಹಾಗೂ ನಗರಸಭೆ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಬಿ.ಎಂ. ಜಯದೇವ ಮಾತನಾಡಿ, ಆಟೋ ಚಾಲಕರೆಲ್ಲರೂ ಬಡವರಾಗಿದ್ದು, ವರ್ಷವಿಡೀ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಹಠಾತ್ತಾಗಿ ಗ್ಯಾಸ್ ದರವನ್ನು ಹೆಚ್ಚಿಸಿದ್ದರಿಂದ ತೀವ್ರ ತೊಂದರೆಯಾಗಿದೆ ಎಂದು ದೂರಿದರು.
ಕೇಂದ್ರದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಲ್ಲಿಂದ 25ಕ್ಕೂ ಹೆಚ್ಚು ಬಾರಿ ತೈಲ ಬೆಲೆ ಏರಿಸಿದೆ. ಅಡುಗೆ ಅನಿಲ ದರವನ್ನು ಸಿಲಿಂಡರ್‌ಗೆ ರು. 220 ಹಾಗೂ ಆಟೋ ಗ್ಯಾಸ್ ದರವನ್ನು ಕೆಜಿಗೆ ರು. 11.30ರಷ್ಟು ಹೆಚ್ಚಿಸಿದ್ದು, ಜನತೆಗೆ ಬರೆ ಎಳೆದಿದೆ. ನಗರದಲ್ಲಿ 700ರಿಂದ 800 ಆಟೋ ಚಾಲಕರಿದ್ದು, ಬಡವರಾದ ತಮಗೆ ಪ್ರತ್ಯೇಕ ಕಾಲನಿ ನಿರ್ಮಿಸಿಕೊಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕೆಂದು ನಗರಸಭೆಗೆ ಎಂಟು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ನಗರದ ರಸ್ತೆಗಳೆಲ್ಲ ತಗ್ಗು-ಗುಂಡಿಗಳಿಂದ ಕೂಡಿದ್ದು, ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. 15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಎದುರು ಧರಣಿ ನಡೆಸುವುದಾಗಿ ಜಯದೇವ ಎಚ್ಚರಿಸಿದರು.
ಮನವಿ ಸ್ವೀಕರಿಸಿದ ನಗರಸಭೆ ಅಭಿಯಂತ ನಂದೆಪ್ಪ ಮಾತನಾಡಿ, ನಗರಸಭೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ ಪಡೆಯಲಾಗಿದೆ. ಒಳಚರಂಡಿ ಕಾಮಗಾರಿ ಕೈಗೊಂಡಿರುವ ಪ್ರದೇಶಗಳಲ್ಲಿ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡುವುದಾಗಿ ಭರವಸೆ ನೀಡಿದರು. ತಹಸೀಲ್ದಾರ್ ಹನುಮಂತಪ್ಪ ಬಡದಾಳ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಅಜಯ ಹುಲ್ಲತ್ತಿ, ಹನುಮಂತಪ್ಪ, ಅಬ್ದುಲ್, ರಾಜು, ಶೇರ್ ಅಲಿ, ರಮೇಶ, ರಾಜಕುಮಾರ, ನಾಶೀರ, ಪರಮೇಶ, ತಿಪ್ಪೇಶ, ಚಂದ್ರಶೇಖರ, ಖಾಜಾ ನೀಲಗಾರ, ಇಬ್ರಾಹಿಂ ನೀಲಗಾರ, ಬೀರೇಶ ಕಜ್ಜರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement