ಸಾಲ ಖಾತೆಗೆ ಖಾತ್ರಿ ಹಣ ಬೇಡ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 6
ಉದ್ಯೋಗ ಖಾತ್ರಿ ಯೋಜನೆ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಆದರೆ ಕೆಲ ಬ್ಯಾಂಕುಗಳು ಅದನ್ನು ಸಾಲದ ಖಾತೆಗೆ ವರ್ಗಾಯಿಸುತ್ತಿದ್ದು, ಇದು ಆರ್‌ಬಿಐ ನಿಯಮದ ಉಲ್ಲಂಘನೆಯಾಗುತ್ತದೆ ಎಂದು ಸಂಸದ ಶಿವಕುಮಾರ ಉದಾಸಿ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಸಿದರು.
ಇಲ್ಲಿಯ ಜಿಪಂ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಫಲಾನುಭವಿಗಳಿಗೆ ಕೂಲಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಆದರೆ ಬ್ಯಾಂಕ್‌ಗಳು ಸಾಲದ ಖಾತೆಗೆ ವರ್ಗಾಯಿಸಿಕೊಳ್ಳುತ್ತಿವೆ ಎಂಬ ಆರೋಪವಿದೆ. ಬಡವರಿಗೆ ಉದ್ಯೋಗ ಕಲ್ಪಿಸಿ ಜೀವನ ಸಾಗಿಸಬೇಕು ಎಂಬುದು ಈ ಯೋಜನೆಯ ಉದ್ದೇಶ. ಸಾಲ ತೀರಿಸಲು ಅಲ್ಲ. ಮುಂದೆ ಹೀಗಾಗದಂತೆ ಬ್ಯಾಂಕ್‌ಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಖಾತೆ ನಿಷ್ಕ್ರಿಯ ಮಾಡಬೇಡಿ
ಜಿಪಂ ಸಿಇಒ ಕೆ.ಬಿ. ಆಂಜನಪ್ಪ ಮಾತನಾಡಿ, ವಿದ್ಯಾರ್ಥಿ ವೇತನ, ಸರ್ಕಾರದ ಇತರ ಯೋಜನೆಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಆದರೆ ಬ್ಯಾಂಕುಗಳು ಅದನ್ನು ಸಾಲದ ಖಾತೆಗೆ ವರ್ಗಾಯಿಸಿಕೊಳ್ಳುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು. ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ತೆರೆಯಲು ಸತಾಯಿಸಬಾರದು. ಉದ್ಯೋಗ ಖಾತ್ರಿ ಹಾಗೂ ವಿದ್ಯಾರ್ಥಿಗಳಿಗೆ ಝೀರೋ ಬ್ಯಾಲೆನ್ಸ್ ಖಾತೆ ತೆರೆಯಲು ಅವಕಾಶ ನೀಡಬೇಕು. ಆರು ತಿಂಗಳಲ್ಲಿ ವ್ಯವಹಾರ ನಡೆಸದೇ ಇದ್ದರೆ ಆ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸದೆ ಮುಂದುವರಿಸಲು ಅವಕಾಶ ಒದಗಿಸಬೇಕು ಎಂದು ಸೂಚಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ. ಉಮೇಶಬಾಬು ಮಾತನಾಡಿ, ಖಾತೆಗೆ ಹಣ ಜಮಾ ಆದರೆ ಅವರ ಸಾಲದ ಖಾತೆ ಕಟ್ಟುಬಾಕಿ ಆಗಿದ್ದಲ್ಲಿ ಹಣ ವರ್ಗಾವಣೆಯಾಗುವಂತೆ ಕೆಲ ಬ್ಯಾಂಕುಗಳು ಸಾಫ್ಟ್‌ವೇರ್ ಅಳವಡಿಸಿಕೊಂಡಿವೆ. ತನ್ನಿಂದ ತಾನೇ ಹಣ ವರ್ಗಾವಣೆಯಾಗುತ್ತದೆ. ಈ ಕುರಿತು ಬ್ಯಾಂಕ್‌ಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಎನ್‌ಒಸಿಗೆ ಏಕೆ ಶುಲ್ಕ?
ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಮಾತನಾಡಿ, ಬ್ಯಾಂಕುಗಳು ಸಾಲ ನೀಡುವಾಗ ಉಳಿದ ಎಲ್ಲ ಬ್ಯಾಂಕುಗಳಿಂದ ನಿರಾಕ್ಷೇಪಣಾ ಪತ್ರ (ಎನ್‌ಓಸಿ) ತರುವಂತೆ ಹೇಳುತ್ತವೆ. ಆಗ ಎನ್‌ಓಸಿ ನೀಡಲು ಬ್ಯಾಂಕುಗಳು ಶುಲ್ಕ ವಿಧಿಸುತ್ತಿವೆ. ಎನ್‌ಓಸಿಯಲ್ಲಿ ಓಟಿಎಸ್ (ಒನ್ ಟೈಮ್ ಸೆಟ್ಲಮೆಂಟ್) ಎಂದು ನಮೂದಿಸಿದರೆ ಬ್ಯಾಂಕುಗಳು ಸಾಲ ನೀಡುತ್ತಿಲ್ಲ ಎಂದು ಅನೇಕರಿಂದ ದೂರುಗಳು ಬಂದಿವೆ ಎಂದು ಸಭೆಯ ಗಮನಕ್ಕೆ ತಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಎನ್‌ಓಸಿ ನೀಡಲು ಶುಲ್ಕ ವಿಧಿಸಬಾರದು. ಅದರಲ್ಲಿ ಓಟಿಎಸ್ ಎಂದು ನಮೂದಿಸಬಾರದು. ಈ ಕುರಿತು ಆರ್‌ಬಿಐನಿಂದ ಎಲ್ಲ ಬ್ಯಾಂಕುಗಳಿಗೆ ಇಂದೇ ಸುತ್ತೋಲೆ ಹೊರಡಿಸಬೇಕು ಎಂದು ಆರ್‌ಬಿಐ ಪ್ರತಿನಿಧಿ ಶಂಕರ ಬಿಸ್ವಾಸ್ ಅವರಲ್ಲಿ ಕೋರಿಕೊಂಡರು. ಇದಕ್ಕೆ ಒಪ್ಪಿದ ಶಂಕರ ಬಿಸ್ವಾಸ್, ಎನ್‌ಓಸಿ ನೀಡಲು ಶುಲ್ಕ ಪಡೆಯುವಂತಿಲ್ಲ. ಸರ್ಕಾರದ ಯೋಜನೆಗಳಲ್ಲಿ ಫಲಾನುಭವಿ ಖಾತೆಗೆ ಬರುವ ಹಣವನ್ನು ಬೇರೆ ಖಾತೆಗೆ ಜಮಾ ಮಾಡಬಾರದು ಎಂದು ಸೂಚಿಸಿದರು.
ಕೃಷಿಗೆ ಶೇ. 48 ಸಾಲ
ಇದಕ್ಕೂ ಮುನ್ನ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಚನ್ನವೀರಯ್ಯ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವಿವಿಧ ಬ್ಯಾಂಕುಗಳಿಂದ ಕೃಷಿ ರಂಗಕ್ಕೆ ವಾರ್ಷಿಕ ಗುರಿಯ ಶೇ. 48ರಷ್ಟು ಸಾಲ ವಿತರಣೆ ಮಾಡಲಾಗಿದೆ. ಬೆಳೆ ಸಾಲ ಶೇ. 56ರಷ್ಟು, ಕೈಗಾರಿಕಾ ಕ್ಷೇತ್ರಕ್ಕೆ ಶೇ. 20, ಇತರೆ ಆದ್ಯತಾ ರಂಗಕ್ಕೆ ಶೇ. 45ರಷ್ಟು (ಆದ್ಯತಾ ರಂಗಕ್ಕೆ ಒಟ್ಟು ಶೇ. 46) ಸಾಲ ನೀಡಲಾಗಿದೆ. ಆದ್ಯತೆಯಲ್ಲದ ಕ್ಷೇತ್ರಗಳಿಗೆ ಶೇ. 69ರಷ್ಟು ಸಾಲ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ವಾಣಿಜ್ಯ ಬ್ಯಾಂಕುಗಳು ಶೇ. 54ರಷ್ಟು ಗುರಿ ಸಾಧಿಸಿದ್ದರೆ, ಗ್ರಾಮೀಣ ಬ್ಯಾಂಕುಗಳು ಶೇ. 43, ಕೆಸಿಸಿ ಬ್ಯಾಂಕು ಶೇ. 22, ಕೆಎಸ್ ಕಾರ್ಡ್ ಬ್ಯಾಂಕ್ ಶೇ. 16, ಕೆಎಸ್‌ಎಫ್‌ಸಿ ಶೇ. 39ರಷ್ಟು ಸಾಲ ನೀಡಿವೆ. 2ನೇ ತ್ರೀಮಾಸಿಕ ಗುರಿಯಲ್ಲಿ ಹಾವೇರಿ ತಾಲೂಕು ಶೇ. 93ರಷ್ಟು ಸಾಧನೆ ಮಾಡಿ ಪ್ರಥಮ, ಹಿರೇಕೆರೂರು ಶೇ. 84ರಷ್ಟು ಪ್ರಗತಿ ಸಾಧಿಸಿ ದ್ವಿತೀಯ ಸ್ಥಾನದಲ್ಲಿದೆ. ದುರ್ಬಲ ವರ್ಗದವರಿಗೆ ರು. 393 ಕೋಟಿ ಸಾಲ ನೀಡಲಾಗಿದೆ. ಡಿಆರ್‌ಐ ಯೋಜನೆಯಲ್ಲಿ ರು. 45 ಕೋಟಿ, ಎಸ್ಸಿ, ಎಸ್ಟಿಗಳಿಗೆ ರು. 199 ಕೋಟಿ, ಮಹಿಳೆಯರಿಗೆ ರು. 25 ಕೋಟಿ ಹಾಗೂ ಅಲ್ಪಸಂಖ್ಯಾತರಿಗೆ ರು. 22 ಕೋಟಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಡಾ ಶೋಭಾ ನಿಸ್ಸೀಮಗೌಡ್ರ ಇದ್ದರು.