ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪಿಯು ಶುಲ್ಕ ಏರಿಕೆ

Lingaraj Badiger
Updated On : 8 Jan 2014, 1:18 am

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 7
ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 20ರಷ್ಟು ಶುಲ್ಕವನ್ನು ಏರಿಸಿ ಆದೇಶ ಹೊರಡಿಸಿರುವುದನ್ನು ವಾಪಸ್ ಪಡೆಯಬೇಕು, ಶುಲ್ಕ ಇಳಿಸಿ ಮರುಪಾವತಿಸಬೇಕೆಂದು ಒತ್ತಾಯಿಸಿ ಎಸ್ಎಫ್ಐ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
ನಗರದ ಜೆಎಚ್ ಕಾಲೇಜು ಎದುರು ಎಸ್ಎಫ್ಐ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು. ರಾಜ್ಯ ಸರ್ಕಾರ ಪದವಿಪೂರ್ವ ಕಾಲೇಜುಗಳ ಶುಲ್ಕವನ್ನು ಶೇ. 20ರಷ್ಟು ಏರಿಸಿ ಆದೇಶ ಹೊರಡಿಸಿರುವುದನ್ನು ವಾಪಸ್ ಪಡೆಯುವಂತೆ, ಹೆಚ್ಚುವರಿ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರಳಿಸುವಂತೆ ಆಗ್ರಹಿಸಿದರು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಶಿಕ್ಷಣದ ವ್ಯಾಪಾರೀಕರಣ
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಸ್ಎಫ್ಐ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ರಾಜ್ಯದ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಶುಲ್ಕ ಶೇ. 20ರಷ್ಟು ಏರಿಸಿ ಆದೇಶ ಹೊರಡಿಸಿದ್ದನ್ನು ಎಸ್ಎಫ್ಐ ಖಂಡಿಸುತ್ತದೆ. ಶುಲ್ಕ ಏರಿಕೆ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಶಿಕ್ಷಣದ ವ್ಯಾಪಾರೀಕರಣದ ಮುಖವಾಡ ಬಹಿರಂಗ ಪಡಿಸಿದೆ. ಹಿಂದೆ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ) ಕಾಯ್ದೆ ಜಾರಿ ಮಾಡಲು ಹೊರಟಾಗ ರಾಜ್ಯಾದ್ಯಂತ ಎಸ್ಎಫ್ಐ ಪ್ರತಿಭಟನೆ ಮಾಡಿ, ತಡೆಹಿಡಿದಿತ್ತು. ಕಾಯ್ದೆ ಜಾರಿಗೆ ಬಾರದ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರ ಹಣದ ಆಸೆಗಾಗಿ ಈಗ ಪದವಿ ಪೂರ್ವ ವಿದ್ಯಾರ್ಥಿಗಳಿಂದ ಶುಲ್ಕದ ಮೂಲಕ ಹಣ ವಸೂಲಿ ದಂಧೆಗೆ ಮುಂದಾಗಿದೆ. ಇದರಿಂದಾಗಿ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ರಾಜ್ಯ ಸರ್ಕಾರದ ಮೇಲಿರುವ ನಿರೀಕ್ಷೆ ಹುಸಿಯಾಗಿದೆ ಎಂದು ಆರೋಪಿಸಿದರು.
ಧನದಾಹಿ ನೀತಿ: ಪ್ರಸನ್ನ ಹಿರೇಮಠ ಮಾತನಾಡಿ, ರಾಜ್ಯ ಸರ್ಕಾರದ ಧನದಾಹಿ ನೀತಿಯ ಈ ಶುಲ್ಕ ಏರಿಕೆಯಿಂದ ಬಡ, ದಲಿತ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಅಪಾಯಗಳಿವೆ. ರಾಜ್ಯದಲ್ಲಿ ಭೀಕರ ಬರಗಾಲ ಕಾಡುತ್ತಿದೆ. ರೈತ, ಕೃಷಿ-ಕಾರ್ಮಿಕರು ಜೀವನ ನಡೆಸಲು ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದಾರೆ. ಈ ಶುಲ್ಕ ಏರಿಕೆಯಿಂದ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿದ್ಯಾರ್ಥಿಗಳ ದಾಖಲಾತಿ, ನೋಂದಣಿ, ಬೋಧನೆ, ಪ್ರಯೋಗಶಾಲೆ ಶುಲ್ಕ ಹೆಚ್ಚಿಸಲಾಗಿದೆ. ತಕ್ಷಣ ಈ ಆದೇಶ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಮಾಮ ನದಾಫ್, ಶೀತಲಕುಮಾರ, ಶಾಂತಾ ನಾಡಿಗೇರ, ಶಿವರಾಜ ಕಲಕೇರಿ, ಮಹಮದ್ ರಫಿಕ್ ನದಾಫ, ನವೀನ ದೊಡ್ಡಣ್ಣವರ, ಶೈಲಾ ಕೆ., ಯಲ್ಲಮ್ಮ, ಸಬಿಹಾ, ರೂಪಾ, ಹರ್ಷಾ, ಅಭಿಲಾಷ ಹೊಸಮಠ, ಪ್ರತೀಕ ಗುತ್ತಲ, ಶುಭಂ ಜಾನ್ವೇಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement