ಪ್ರತಿಭೆಗೆ ಅಂಕ ಮಾನದಂಡವಲ್ಲ
ಧಾರವಾಡ: ಪ್ರತಿಭೆ ಒರೆಗೆ ಹಚ್ಚುವ ವೇಳೆ ಅಂಕಗಳು ಮಾನದಂಡವಲ್ಲ.ವಿದ್ಯಾರ್ಥಿಯ ಸಂವಹನ ಕಲೆ, ಸಾಮಾನ್ಯ ಜ್ಞಾನ, ನಾಯಕತ್ವದ ಗುಣಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರಾಚಾರ್ಯ ಡಾ. ಅಜಿತ ಪ್ರಸಾದ ಹೇಳಿದರು.
ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ನಡೆದ ಮೂರು ದಿನಗಳ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಯಾಂಪಸ್ ಸಂದರ್ಶನದಲ್ಲಿ ಕೇವಲ ಅಂಕಗಳ ಆಧಾರದ ಮೇಲೆ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಪರೀಕ್ಷಿಸಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕೌಶಲ್ಯಗಳ ಕೊರತೆಯಿಂದ ಉತ್ತರ ಕರ್ನಾಟಕ ವಿದ್ಯಾರ್ಥಿಗಳು ಅವಕಾಶಗಳಿಂದ ವಂಚಿತರಾಗಿದ್ದಾರೆ. ಆದರೆ, ಅವರಿಗೆ ಉತ್ತೇಜನ ಹಾಗೂ ಅವಕಾಶಗಳ ಅವಶ್ಯಕತೆ ಇದೆ ಎಂದರು.
ವಿಪ್ರೋ ಕಂಪನಿಯ ನೀತೂ ಜಾಯ್ ಮಾತನಾಡಿದರು. ಮಹಾವೀರ ಉಪಾಧ್ಯೆ, ಸೂರಜ ಜೈನ್, ವಿವೇಕ ಲಕ್ಷ್ಮೇಶ್ವರ ಇದ್ದರು.