ಬಿಜೆಪಿ ಯುವ ಮೋರ್ಚಾ ಕ್ರಿಕೆಟ್
ಹಾವೇರಿ: ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಸಮಿತಿ ಸೂಚನೆ ಮೇರೆಗೆ ಜ. 11ರಂದ 13ರ ವರೆಗೆ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ ಮಳ್ಳೂರ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಖೇಲೇಗಾ ಯುವ, ಜೀತೇಗಾ ಭಾರತ್' ಘೋಷವಾಕ್ಯದೊಂದಿಗೆ ರಾಷ್ಟ್ರದ ಎಲ್ಲೆಡೆ ಕ್ರಿಕೆಟ್ ಪಂದ್ಯಾವಳಿ ನಡೆಸಲು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅನುರಾಗ್ ಠಾಕೂರ್ ಸೂಚನೆ ನೀಡಿದ್ದಾರೆ. ಜಿಲ್ಲೆಯ ಬಿಜೆಪಿ 8 ಮಂಡಳಗಳಿಂದ ತಲಾ 2ರಂತೆ 16 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಪಂದ್ಯಾವಳಿಯ ಫೈನಲ್ನಲ್ಲಿ ಗೆದ್ದ ತಂಡ ರಾಜ್ಯಮಟ್ಟಕ್ಕೆ ತೆರಳಲಿದೆ. ರಾಜ್ಯಮಟ್ಟದ ಪಂದ್ಯಾವಳಿ ಜ. 17ರಿಂದ 19ರ ವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಲ್ಲಿ ಗೆದ್ದ ತಂಡಕ್ಕೆ ಧರ್ಮಶಾಲಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶವಿರುತ್ತದೆ ಎಂದು ತಿಳಿಸಿದರು. ಜ. 11ರಂದು ಪಂದ್ಯಾವಳಿಯನ್ನು ವಿಧಾನ ಪರಿಷತ್ ಸದಸ್ಯೆ ಸೋಮಣ್ಣ ಬೇವಿನಮರದ ಉದ್ಘಾಟಿಸಲಿದ್ದಾರೆ. ಪ್ರಮುಖರಾದ ಮೋಹನ ಲಿಂಬಿಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಪಾಲ್ಗೊಳ್ಳಲಿದ್ದಾರೆ. ತಂಡಗಳ ಆಯ್ಕೆ ಜವಾಬ್ದಾರಿಯನ್ನು ಆಯಾ ಮಂಡಲದ ಅಧ್ಯಕ್ಷರಿಗೆ ವಹಿಸಲಾಗಿದೆ. ನಾಕೌಟ್ ಮಾದರಿಯಲ್ಲಿ ತಲಾ 10 ಓವರ್ಗಳ ಪಂದ್ಯ ನಡೆಯಲಿದ್ದು, ಗೆದ್ದ ತಂಡಕ್ಕೆ ರು. 10 ಸಾವಿರ ನಗದು ಹಾಗೂ ರಾಜ್ಯ ಮಟ್ಟದ ಪಂದ್ಯಕ್ಕೆ ತೆರಳುವ ಖರ್ಚನ್ನು ಮೋರ್ಚಾ ನೋಡಿಕೊಳ್ಳಲಿದೆ. ರನ್ನರ್ಸ್ ಅಪ್ ತಂಡಕ್ಕೆ ರು. 5 ಸಾವಿರ ಬಹುಮಾನ ನೀಡಲಾಗುವುದು. ಪ್ರವೇಶ ಶುಲ್ಕ ರು. 500 ಇದ್ದು, ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವ ಉದ್ದೇಶದಿಂದ ಈ ಬೃಹತ್ ಪಂದ್ಯಾವಳಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಂದ್ಯಾವಳಿಯ ಸಂಚಾಲಕ ರವಿಚಂದ್ರ ಪುರೋಹಿತ (ಮೊ. 9986156177), ಅಚ್ಯುತ ಹೆಸರೂರ (ಮೊ. 9686222257) ಸಂಪರ್ಕಿಸುವಂತೆ ಅವರು ತಿಳಿಸಿದರು. ಪಂದ್ಯಾವಳಿ ಸಂಚಾಲಕ ರವಿಚಂದ್ರ ಪುರೋಹಿತ, ಅಚ್ಯುತ್ ಹೆಸರೂರ, ಪ್ರಸನ್ನ ಧಾರವಾಡ, ಸೋಮಶೇಖರ ಕುರ್ಡೇಕರ ಇದ್ದರು.