ವೇತನ: ಸುಗ್ರೀವಾಜ್ಞೆಗೆ ವಿರೋಧ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 7
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ನೇಮಕಾತಿ ದಿನಾಂಕದ ಬದಲಾಗಿ ಅನುದಾನಕ್ಕೆ ಒಳಪಟ್ಟಲ್ಲಿಂದ ಸಂಬಳ, ಭತ್ಯೆ, ಪಿಂಚಣಿ ಸೌಲಭ್ಯ ನೀಡುವಂತೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಗೌರವಾಧ್ಯಕ್ಷ ಪ್ರೊ ಎಸ್.ವಿ. ಸಂಕನೂರ ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜ. 3ರಂದು ನಡೆದ ಸಂಪುಟದ ಸಭೆಯಲ್ಲಿ ಕೈಗೊಂಡ ತೀರ್ಮಾನ ಅಸಂಬದ್ಧವಾಗಿದೆ. ಶಿಕ್ಷಕರನ್ನು ನಿಯಂತ್ರಿಸಲು ಸರ್ಕಾರ ಪರೋಕ್ಷವಾಗಿ ಮುಂದಾಗಿದೆ. ಯಾವುದೇ ಕಾರಣಕ್ಕೂ ಸುಗ್ರೀವಾಜ್ಞೆ ಹೊರಡಿಸದಂತೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.
ಆದೇಶ ಅರ್ಥೈಸಿಕೊಂಡಿಲ್ಲ
ಇತ್ತೀಚೆಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕಾಲ್ಪನಿಕ ವೇತನ ಕುರಿತು ನೀಡಿದ ತೀರ್ಪನ್ನು ಸರ್ಕಾರ ತಪ್ಪಾಗಿ ಅರ್ಥೈಸಿದ್ದು ದುರದೃಷ್ಟಕರ. ತೀರ್ಪಿನಲ್ಲಿ ಅನುದಾನ ರಹಿತ ಅವಧಿಗೆ ನೇಮಕಾತಿ ದಿನದಿಂದ ಕಾಲ್ಪನಿಕ ವೇತನ ನಿಗದಿಪಡಿಸಿ ವಾರ್ಷಿಕ ಬಡ್ತಿ ಮತ್ತು ಪಿಂಚಣಿ ಸೌಲಭ್ಯ ನೀಡುವಂತೆ ಸೂಚಿಸಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ನಮೂನೆ 1.2.3.4ರ ಅಡಿಯಲ್ಲಿ ಅನುದಾನ ರಹಿತ ಅವಧಿ ಬಾಕಿ ವೇತನದ ಮಾಹಿತಿ ಸಂಗ್ರಹಿಸಿದ್ದು, ನ್ಯಾಯಾಲಯದ ಆದೇಶದಿಂದ ಸರ್ಕಾರಕ್ಕೆ ರು. 5 ಸಾವಿರ ಕೋಟಿ ಆರ್ಥಿಕ ಹೊರೆ ಬೀಳುವುದೆಂದು ಸುಳ್ಳು ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿದೆ ಎಂದು ದೂರಿದರು.
ರಾಜ್ಯಪಾಲರಿಗೆ ಮನವಿ
ಕೋರ್ಟ್ ಆದೇಶದಿಂದ ಖುಷಿಪಟ್ಟ ಶಿಕ್ಷಕರು ಬಾಕಿ ವೇತನ ಪಡೆಯಲು ಬಿಲ್ ಮಾಡಿಸಿದ್ದಾರೆ. ಆದರೆ ಸುಗ್ರೀವಾಜ್ಞೆ ನಿರ್ಧಾರದಿಂದ ಅವರಿಗೆಲ್ಲ ನಿರಾಸೆಯಾಗಿದೆ. ಸುಗ್ರೀವಾಜ್ಞೆಗೆ ಅನುಮೋದನೆ ನೀಡದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಶಿಕ್ಷಕರಿಗೆ ನ್ಯಾಯಸಮ್ಮತ ವೇತನ ನೀಡುವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ಶಿಕ್ಷಕರಿಗಷ್ಟೇ ಕಾಲ್ಪನಿಕ ವೇತನದ ಸೌಲಭ್ಯ ನೀಡುವುದರಿಂದ ತಾರತಮ್ಯ ಮಾಡಿದಂತಾಗುತ್ತದೆ. ಸರ್ಕಾರ ಬಾಕಿ ಉಳಿದ ಶಿಕ್ಷಕರಿಗೂ ಕಾಲ್ಪನಿಕ ವೇತನ ಸೌಲಭ್ಯ ಕಲ್ಪಿಸಬೇಕು. ಸುಗ್ರೀವಾಜ್ಞೆ ನಿರ್ಣಯ ಕೈಬಿಟ್ಟು, ಎಲ್ಲ ಶಿಕ್ಷಕ ಸಂಘಟನೆಗಳ ಸದಸ್ಯರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಪರಿಹಾರಕ್ಕಾಗಿ ಮತ್ತೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾರ್ಯಾಧ್ಯಕ್ಷ ಪ್ರಾ. ಲಿಂಗಯ್ಯ ಹಿರೇಮಠ, ಅಧ್ಯಕ್ಷ ಎ.ಎಸ್. ಪಾಟೀಲ, ಕಾರ್ಯದರ್ಶಿ ಶೇಖರ ಗೋಳ, ಬಿ.ಆರ್. ರಾಠೋಡ, ಎಸ್.ಎಚ್. ವಾಸನದ, ಪ್ರಸಾದ ರೆಡ್ಡಿ, ಎಂ.ಸಿ. ಕಟ್ಟಿಮನಿ, ಈಶ್ವರ ಶೆಟ್ಟರ, ಎಸ್.ಎನ್. ಮಳಲಿ, ಜಿ.ಎಂ. ಹಕಾರಿ, ಆರ್.ಎಫ್. ರಿತ್ತಿ, ಅಶೋಕ ಅಂಗಡಿ, ಡಿ.ಆರ್. ನಾಯಕ, ಜಿ.ಪಿ. ನಾಯಕ, ಎಸ್.ಎಸ್. ಹಿರೇಮಠ, ಸಂಕದಾಳ ಉಪಸ್ಥಿತರಿದ್ದರು.