ತಪ್ಪು ತಿದ್ದಲು ವಿಲೀನ
ಹಾವೇರಿ: ಬಿಜೆಪಿ ನಾಯಕರ ನಡುವಿನ ಒಡಕಿನ ಲಾಭ ಪಡೆದ ಕಾಂಗ್ರೆಸ್ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿದೆ. ನಮ್ಮ ಸೋಲಿಗೆ ಮತ ವಿಭಜನೆಯೇ ಕಾರಣ ಎಂಬುದು ಬಿಜೆಪಿ, ಕೆಜೆಪಿ ನಾಯಕರಿಗೆ ಅರಿವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಈ ತಪ್ಪು ಮರುಕಳಿಸಬಾರದು ಎಂಬ ಉದ್ದೇಶದಿಂದ ಒಂದಾಗುತ್ತಿದ್ದೇವೆ ಎಂದು ಮಾಜಿ ಸಚಿವ, ಕೆಜೆಪಿ ರಾಜ್ಯ ಉಪಾಧ್ಯಕ್ಷ ಸಿ.ಎಂ. ಉದಾಸಿ ಹೇಳಿದರು.
ನಗರದಲ್ಲಿ ಬುಧವಾರ ಕೆಜೆಪಿ ಕಾರ್ಯಕರ್ತರ ಕೊನೆಯ ಸಭೆಯಲ್ಲಿ ಅವರು ಮಾತನಾಡಿದರು. ಆಗಿರುವ ತಪ್ಪನ್ನು ತಿದ್ದಿಕೊಂಡು ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದು ಅಗತ್ಯವಿದೆ. 2004ರಲ್ಲಿ ತಾವು ಬಿಜೆಪಿಗೆ ಆಗಮಿಸಿದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನೇತೃತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿ 72 ಸ್ಥಾನ ಗಳಿಸಿದ್ದೆವು. 2008ರ ಚುನಾವಣೆಯಲ್ಲಿ 110 ಸ್ಥಾನ, ಅದರಲ್ಲೂ ಅಖಂಡ ಧಾರವಾಡ ಜಿಲ್ಲೆಯ 17ರಲ್ಲಿ 15 ಕ್ಷೇತ್ರ ಗೆದ್ದುಕೊಂಡೆವು. ಆದರೆ ಕಳೆದ ಚುನಾವಣೆಯಲ್ಲಿ ಮತವಿಭಜನೆ ಆಗಿ ಹೀನಾಯ ಸೋಲು ಕಾಣಬೇಕಾಯಿತು. ಮುಂದೆ ಭಿನ್ನಾಭಿಪ್ರಾಯ, ಎಲ್ಲ ಒಡಕನ್ನು ಬದಿಗಿರಿಸಿ, ಬಿಜೆಪಿ ನೇತೃತ್ವದ ಸರ್ಕಾರವನ್ನು ಕೇಂದ್ರದಲ್ಲಿ ತರಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕಿದೆ ಎಂದು ಕರೆ ನೀಡಿದರು.
ಹಾವೇರಿ ಸಮಾವೇಶಕ್ಕೆ ಬೇಡಿಕೆ
ಯಡಿಯೂರಪ್ಪ ಬಿಜೆಪಿ ಸೇರ್ಪಡೆಗೆ ಹಾವೇರಿಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಲು ಬೇಡಿಕೆ ಇಡಲಾಗಿದೆ. ದಾವಣಗೆರೆ ಇಲ್ಲವೇ ಹಾವೇರಿಯಲ್ಲಿ ಸಮಾವೇಶ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 10 ವರ್ಷ ಆಳಿದ ಯುಪಿಎ ಸರ್ಕಾರ ದೇಶವನ್ನು ಕನಿಷ್ಠ ಮಟ್ಟಕ್ಕೆ ತಳ್ಳಿದೆ. ಈಗ ನಾಯಕತ್ವ ಬದಲಾಗದಿದ್ದರೆ ಉಳಿಗಾಲವಿಲ್ಲ ಎಂಬ ಸ್ಥಿತಿ ಎದುರಾಗಿದೆ. ಮೋದಿ ಪ್ರಧಾನಿಯಾಗಲು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಠ 20 ಬಿಜೆಪಿ ಸಂಸದರನ್ನು ಗೆಲ್ಲಿಸಲು ಶ್ರಮಿಸೋಣ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಎರಡು ಮಂತ್ರಿ ಸ್ಥಾನ ನೀಡಲಾಗಿತ್ತು. ಹಾಲಿ ಕಾಂಗ್ರೆಸ್ ಸರ್ಕಾರ ಒಂದನ್ನೂ ನೀಡಿಲ್ಲ. ಹೊರಗಿನವರು ಜಿಲ್ಲೆಗೆ ಬಂದು ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ? ಸ್ಥಳೀಯವಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗಲೇ ಜನರಿಂದ ದೂರವಾಗುತ್ತಿದೆ ಎಂದು ಆರೋಪಿಸಿದರು.
ಇಂದು ಪ್ರಾಥಮಿಕ ಸದಸ್ಯತ್ವ: ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ ಮಾತನಾಡಿ, ಬಿಜೆಪಿ, ಕೆಜೆಪಿ ಒಂದಾಗಿ ಕಾಂಗ್ರೆಸ್ನ್ನು ಸೋಲಿಸಬೇಕು ಎಂಬುದು ಎರಡೂ ಪಕ್ಷಗಳ ಕಾರ್ಯಕರ್ತರ ಆಶಯವಾಗಿತ್ತು. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಉಭಯ ಪಕ್ಷಗಳ ಮುಖಂಡರು ಒಂದಾಗುತ್ತಿದ್ದೇವೆ. ಪಕ್ಷದ ನಾಯಕರು ಕೈಗೊಂಡ ತೀರ್ಮಾನಕ್ಕೆ ಬದ್ಧರಾಗಿ ಗುರುವಾರ ಬೆಂಗಳೂರಿನ ಕೆಜೆಪಿ ಕಚೇರಿಯಿಂದ ಬಿಜೆಪಿ ಕಚೇರಿಗೆ ತೆರಳಿ ಬಿಜೆಪಿ ಸದಸ್ಯತ್ವ ಪಡೆದು ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇವೆ ಎಂದರು.
ಮಾಜಿ ಶಾಸಕ ನೆಹರೂ ಓಲೇಕಾರ, ಜಿ. ಶಿವಣ್ಣ, ರಾಜೇಂದ್ರ ಹಾವೇರಣ್ಣನವರ, ರಾಮಲಿಂಗಣ್ಣನವರ, ಲಿಂಗರಾಜ ಚಪ್ಪರದಹಳ್ಳಿ, ಎಂ.ಆರ್. ಪಾಟೀಲ, ಮುರುಗೇಶ ಶೆಟ್ಟರ್, ಸುಜಾತಾ ಕೊಟಗಿಮನಿ, ಶಾಂತಮ್ಮ ಹಾದಿಮನಿ, ಸಂತೋಷ ಪಾಟೀಲ, ಶಿವಕುಮಾರ ಮುದ್ದಪ್ಪಳ್ಳವರ, ಜಗದೀಶ ಮಲಗೋಡ ಇದ್ದರು. ಕೆ.ಸಿ. ಕೋರಿ, ಸುರೇಶ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.