ಬಿಸಿಯೂಟ ಅಕ್ರಮ: ಮುಖ್ಯ ಶಿಕ್ಷಕರ ಮೇಲೆ ಕ್ರಮ
ಹಾವೇರಿ: ಬ್ಯಾಡಗಿ ತಾಲೂಕಿನ 18 ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪೈಕಿ ಕೆಲ ಶಾಲೆಗಳ ಮುಖ್ಯ ಶಿಕ್ಷಕರು ಬಿಸಿಯೂಟ ಯೋಜನೆಯಲ್ಲಿ ಕರ್ತವ್ಯ ಲೋಪ ಎಸಗಿದ್ದು, ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಕ್ಷರ ದಾಸೋಹ ಕಾರ್ಯಕ್ರಮದ ಪರಾಮರ್ಶನ ತನಿಖಾ ಸಮಿತಿ ಶಿಫಾರಸು ಮಾಡಿದೆ.
ಜಿಪಂ ಸಭಾಭವನದಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ ಖಾಸಗಿ ಸಂಘ ಸಂಸ್ಥೆಗಳ ಮೂಲಕ ಬಿಸಿಯೂಟ ತಯಾರಿಸಿ ಸರಬರಾಜು ಮಾಡುತ್ತಿರುವ ಬಗ್ಗೆ ತನಿಖಾ ಸಮಿತಿ ವರದಿ ಬಗ್ಗೆ ಚರ್ಚಿಸಲು ಗುರುವಾರ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಸಿತು.
ಅಕ್ಷರ ದಾಸೋಹ ಯೋಜನೆ ಸಾಂಘಿಕ ಕಾರ್ಯಕ್ರಮ. ವಿದ್ಯಾರ್ಥಿಗಳ, ಪಾಲಕರ, ಶಿಕ್ಷಕರ ಸಹಭಾಗಿತ್ವದಡಿ ಎಲ್ಲರ ಆಸಕ್ತಿ ಮೇರೆಗೆ ಅನುಷ್ಠಾನಗೊಳಿಸುವ ಯೋಜನೆ. ಬ್ಯಾಡಗಿ ತಾಲೂಕಿನ 18 ಅನುದಾನಿತ ಶಾಲೆಗಳಿಗೆ ಸೌಕರ್ಯ ಒದಗಿಸಲು ಸೂಚಿಸಿದೆ.
ಮುಖ್ಯ ಶಿಕ್ಷಕರೇ ಹೊಣೆ: ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸೇವಾ ಸಂಸ್ಥೆಗಳಿಗೆ ವಿಸ್ತರಿಸುವುದನ್ನು ನಿಷೇಧಿಸುವಂತೆ ಸರ್ಕಾರ 2012, ಜೂ. 4ರಂದು ಆದೇಶ ಮಾಡಿದೆ. ಬ್ಯಾಡಗಿ ತಾಲೂಕಿನ 14 ಅನುದಾನಿತ ಪ್ರೌಢಶಾಲೆ, 4 ಪ್ರಾಥಮಿಕ ಶಾಲೆಗಳ ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನದ ಜವಾಬ್ದಾರಿಯನ್ನು ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ವಹಿಸಬೇಕು ಎಂದು ಜಿಪಂ ಕೂಡ ಆದೇಶಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದೆ.
ಬ್ಯಾಡಗಿ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗೆ ನೀಡಿದ ಬೇಡಿಕೆ ಪತ್ರದಲ್ಲಿ ಮತ್ತು ಪೂರೈಕೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದ್ದು, ಅದರ ಮರು ಭರಣಕ್ಕೆ ಶಾಲೆಯ ಮುಖ್ಯ ಶಿಕ್ಷಕರನ್ನು ಹೊಣೆ ಮಾಡಬೇಕು. ಹರಿಹರದ ಆದರ್ಶ ಎಜ್ಯುಕೇಶನ್ ಮತ್ತು ರೂರಲ್ ಡೆವಲಪಮೆಂಟ್ ಸೊಸೈಟಿ ಕಳೆದ ನ. 20ರಿಂದ ಇಲಾಖಾ ಅಧಿಕಾರಿಗಳ, ಸಂಸ್ಥೆಯ ಮುಖ್ಯಸ್ಥರ ಗಮನಕ್ಕೂ ತಾರದೆ ಆಹಾರ ಪೂರೈಕೆ ನಿಲ್ಲಿಸಿದೆ. ಒಡಂಬಡಿಕೆ ಪ್ರಕಾರ ಕ್ರಮ ಕೈಗೊಳ್ಳಬೇಕು. ಇಲಾಖೆ ಎಲ್ಲ ಎನ್ಜಿಒಗಳ ಜತೆಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ಗಂಭೀರ ಲೋಪಗಳಿದ್ದು, ಪರಿಷ್ಕರಿಸಬೇಕು. ಆದರ್ಶ ಸೊಸೈಟಿಯಿಂದ ಪೂರೈಕೆಯಾಗುತ್ತಿದ್ದ ಆಹಾರದ ಬಗ್ಗೆ ಗೊಂದಲವಿದೆ. ಬ್ಯಾಡಗಿ ತಾಲೂಕಿನಲ್ಲಿ ಶಾಲಾ ಹಂತದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಬ್ಯಾಡಗಿ ತಾಲೂಕಿನ 18 ಅನುದಾನಿತ ಶಾಲೆಗಳ ಮುಖ್ಯ ಶಿಕ್ಷಕರು ಹರಿಹರದ ಆದರ್ಶ ಸೊಸೈಟಿಯಿಂದ ಕಳಪೆ ಗುಣಮಟ್ಟದ ಊಟ ಸರಬರಾಜು ಆಗುತ್ತಿದೆ ಎಂದು ನ. 19ರಂದು ಪ್ರತಿಭಟಿಸಿ ಊಟವನ್ನು ತಿರಸ್ಕರಿಸಿದ್ದರು. ನ. 25ರಂದು ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸ್ವಯಂಸೇವಾ ಸಂಸ್ಥೆಗಳಿಂದ ಪೂರೈಸುತ್ತಿರುವ ಆಹಾರದ ಗುಣಮಟ್ಟ, ವಿಶೇಷವಾಗಿ ಬ್ಯಾಡಗಿ ಘಟನೆ ಬಗ್ಗೆ ಪರಿಶೀಲಿಸಲು ಸಮಿತಿ ರಚಿಸಲಾಗಿತ್ತು. ಸಭೆಯಲ್ಲಿ ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಡಾ ಶೋಭಾ ನಿಸ್ಸೀಮಗೌಡ್ರ, ಜಿಪಂ ಸಿಇಒ ಕೆ.ಬಿ. ಆಂಜನಪ್ಪ, ಜಿಪಂ ಉಪ ಕಾರ್ಯದರ್ಶಿ ಗೋವಿಂದಸ್ವಾಮಿ ಇದ್ದರು.