ಮಲಿನವಾಗಿದೆ ಮೇಡ್ಲೆರಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜ. 9
ಪಟ್ಟಣ ಪಂಚಾಯತ್ ಆಗಿ ಪದೋನ್ನತಿ ಹೊಂದಲು ಎಲ್ಲ ಅರ್ಹತೆ ಹೊಂದಿರುವ, ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತ್ ಅಕ್ಷರಶಃ ಗಬ್ಬೆದ್ದು ನಾರುತ್ತಿದೆ.
ಐತಿಹಾಸಿಕ ಬೀರಲಿಂಗೇಶ್ವರ ದೇವಸ್ಥಾನವಿರುವ ಈ ಊರಿನ ಎಲ್ಲೆಡೆ ಕಸದ ರಾಶಿಗಳು, ರಸ್ತೆಗಳಲ್ಲಿ ತಿಪ್ಪೆ ಗುಡ್ಡೆಗಳು, ಊರೊಳಗಿನ ಗಟಾರಗಳಲ್ಲಿ ತುಂಬಿ-ತುಳುಕುವ ಕೊಳಚೆ ನೀರು ಈ ದುರ್ನಾತಕ್ಕೆ ಕಾರಣ. ಇದಕ್ಕೆ ಗ್ರಾಪಂ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ತಾಲೂಕು ಕೇಂದ್ರ ಸ್ಥಾನದಿಂದ 14 ಕಿ.ಮೀ. ದೂರವಿರುವ ಈ ಊರು ಸ್ವಚ್ಛತೆ ವಿಚಾರದಲ್ಲಿ ಅದಕ್ಕಿಂತಲೂ ದೂರವಿದೆ. ಹೀಗಾಗಿ, ವಿವಿಧ ಕಾಯಿಲೆಗಳಿಂದ ಜನ ಬಳಲುತ್ತಿದ್ದು, ಆಸ್ಪತ್ರೆ ಸೇರುತ್ತಿದ್ದಾರೆ.
ಮೇಡ್ಲೆರಿ ಗ್ರಾಪಂಗೆ 24 ಸದಸ್ಯರಿದ್ದಾರೆ. ಆದರೆ, ಗ್ರಾಮದಲ್ಲಿ ಮೂಲಸೌಲಭ್ಯಗಳಾದ ಬಸ್ ನಿಲ್ದಾಣ, ಸಂತೆ ಮೈದಾನ, ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆ, ವಿಶಾಲವಾದ ಆಟದ ಮೈದಾನ - ಇವಾವುದೂ ಇಲ್ಲ. ಹೆಚ್ಚೇಕೆ, ಶಾಲೆಯೂ ಸುಸಜ್ಜಿತವಾಗಿಲ್ಲ ಎಂದರೆ ನಂಬುತ್ತೀರಾ?
ಬಯಲೇ ಶೌಚಾಲಯ
ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ವಿದ್ಯುತ್ ಮರುಪ್ರಸರಣ ಕೇಂದ್ರ, ಖಾಸಗಿ ಮತ್ತು ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜು, 11 ಅಂಗನವಾಡಿ ಕೇಂದ್ರಗಳು ಹಾಗೂ ಒಂದು ಉರ್ದು ಪ್ರಾಥಮಿಕ ಶಾಲೆ ಈ ಗ್ರಾಮದಲ್ಲಿವೆ. 2011ರ ಜನಗಣತಿ ಪ್ರಕಾರ ಇಲ್ಲಿನ ಜನಸಂಖ್ಯೆ 24 ಸಾವಿರ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ನೀಡುತ್ತಿದ್ದರೂ ಮನೆಗೊಂದು ಶೌಚಾಲಯ ನಿರ್ಮಿಸುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಗ್ರಾಮಸ್ಥರಿಗೆ ಈ ಬಗ್ಗೆ ತಿಳಿವಳಿಕೆ ನೀಡಲು ಗ್ರಾಪಂ ವಿಫಲವಾಗಿದ್ದರಿಂದ ಬಹುತೇಕ ಜನರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಗ್ರಾಮದ ರಸ್ತೆಗಳೆಲ್ಲ ಶೌಚಾಲಯಗಳಾಗಿ ಮಾರ್ಪಟ್ಟಿವೆ. ಗ್ರಾಮಸ್ಥರ ಅನುಕೂಲಕ್ಕಾಗಿ ಗ್ರಾಪಂ ಸಾರ್ವಜನಿಕ ಶೌಚಾಲಯಗಳನ್ನಾದರೂ ನಿರ್ಮಿಸಬೇಕೆಂದು ನೊಂದ ಮಹಿಳೆಯರು ಆಗ್ರಹಿಸಿದ್ದಾರೆ.
ರಸ್ತೆಯೇ ಸಂತೆ ಮೈದಾನ
ಪ್ರತಿ ಸೋಮವಾರ ಈ ಊರಿನಲ್ಲಿ ಸಂತೆ. ಅದು ನಡೆಯುವುದು ಮಾತ್ರ ರಸ್ತೆಯಲ್ಲಿ. ಮೇಡ್ಲೆರಿ, ಅಂಕಸಾಪುರ, ರಡ್ಡಿಯಲ್ಲಾಪುರ, ಕೋಣನತಂಬಿಗಿ, ಆರೇಮಲ್ಲಾಪುರ, ಬೇಲೂರು, ಹೀಲದಹಳ್ಳಿ, ಉದಗಟ್ಟಿ, ಮೇಡ್ಲೇರಿ ತಾಂಡಾ, ಸೋಮಲಾಪುರ ಮುಂತಾದ ಗ್ರಾಮಗಳಿಂದ ಜನರು, ವ್ಯಾಪಾರಿಗಳು ಬರುತ್ತಾರೆ. ಸಂತೆ ಮೈದಾನ ನಿರ್ಮಿಸಿ, ವ್ಯವಸ್ಥೆ ಕಲ್ಪಿಸುವಂತೆ ಇವರೆಲ್ಲ ಆಗ್ರಹಿಸುತ್ತಿರುವುದು ಗ್ರಾಪಂಗೆ ಕೇಳಿಸುತ್ತಲೇ ಇಲ್ಲ.
ಗಟಾರದಲ್ಲಿ ಸಾರ್ವಜನಿಕ ನಳ
ವಿಶ್ವ ಬ್ಯಾಂಕ್ನ ಜಲ ನಿರ್ಮಲ ಯೋಜನೆ ಅಡಿಯಲ್ಲಿ ಜನತೆಗೆ ಕುಡಿಯುವ ಶುದ್ಧ ನೀರು ಪೂರೈಸಲಾಗುತ್ತಿದೆ. ಹೊರಬೀರೇಶ್ವರ ದೇವಸ್ಥಾನಕ್ಕೆ ಹೋಗುವ ಓಣಿ ಹಾಗೂ ಇತರ ಕೆಲವೆಡೆ ನೀರಿನ ಪೈಪ್ಲೈನ್ ಹಾಗೂ ನಳಗಳು ಗಟಾರದಲ್ಲೇ ಇವೆ. ನೀರಿನೊಂದಿಗೆ ಕೊಳಚೆ ಬೆರೆತು ರೋಗಗಳನ್ನು ಹರಡುತ್ತಿದೆ.
ಇನ್ನಾದರೂ ಗ್ರಾಪಂ ಆಡಳಿತ ಸೂಕ್ತ ಕ್ರಮಕ್ಕೆ ಮುಂದಾಗಲಿ. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸಾಬ್ಜನ ಇಟಗಿ