ಮಾದಲಿ ಈಗ ಸುಲಭ: ಹಿಟ್ಟು ಮಾಡಲು ಬಂದಿದೆ ಗ್ರೈಂಡರ್ ದರ್ಬಾರ್!
ಹಾವೇರಿ: ನಗರದ ಗ್ರೈಂಡರ್ ಅಂಗಡಿ ಮುಂದೆ ಕಿಕ್ಕಿರಿದು ನಿಂತ ತಾಯಂದಿರ ಗುಂಪು. ಏನೋ ಅವಘಡ ಸಂಭವಿಸಿದೆ ಎಂದು ನೋಡಿದರೆ ಅಲ್ಲಿ ಮಹಿಳೆಯರು ನಾ ಮುಂದು ತಾ ಮುಂದು ಎಂದು ತಾವು ತಂದ ಗೋದಿಯಿಂದ ತಯಾರಿಸಿದ ರೊಟ್ಟಿಯನ್ನು ಗ್ರೈಂಡರ್ಗೆ ಹಾಕಿಸಲು ಮುಂದಾಗುತ್ತಿದ್ದರು. ಇದು ನಗರದ ಹುಕ್ಕೇರಿ ಮಠದ ಜಾತ್ರೆ ನಿಮಿತ್ತ ನಗರದ ಮಹಿಳೆಯರು ಮಾದಲಿ ತಯಾರಿಸಲು ಗ್ರೈಂಡರ್ಗಳಿಗೆ ಮುಗಿಬೀಳುತ್ತಿರುವ ದೃಶ್ಯ. ಪಾರಂಪರಿಕ ಸಿಹಿ ಪದಾರ್ಥವಾದ ಮಾದಲಿ ತಯಾರಿಸುವುದು ಜಾತ್ರೆಯ ವಿಶೇಷ. ಹಿಂದೆಲ್ಲ ಜಾತ್ರೆಗೆ ಒಂದು ವಾರ ಇರುವಾಗಲೇ ಮಾದಲಿ ತಯಾರಿಸಲು ಸಿದ್ಧತೆ ನಡೆಸುತ್ತಿದ್ದರು. ಗೋದಿ ರೊಟ್ಟಿಯನ್ನು ಮನೆಯ ಮಂದಿ ಮತ್ತು ಅಕ್ಕಪಕ್ಕದ ಮಹಿಳೆಯರೆಲ್ಲ ಕೂಡಿ ಕಲ್ಲಿನ ಒಳ್ಳಿನಲ್ಲಿ ಒನಕೆಯಿಂದ ಕುಟ್ಟಿ ಮಾದಲಿ ತಯಾರಿಸುತ್ತಿದ್ದರು.
ಒಳಕಲ್ಲಿನ ಸ್ಥಾನವನ್ನು ಗ್ರೈಂಡರ್ ಆಕ್ರಮಿಸಿ, ಮಹಿಳೆಯರ ಶ್ರಮವನ್ನು ಕಡಿಮೆ ಮಾಡಿದೆ. ಒಂದೇ ದಿನದಲ್ಲಿ ಮಾದಲಿ ಸಿದ್ಧವಾಗುತ್ತದೆ. ಗ್ರೈಂಡರ್ಗೆ ರೊಟ್ಟಿ, ಬೆಲ್ಲವನ್ನು ಸೇರಿಸಿ ಹಾಕಿದರೆ ಕ್ಷಣಾರ್ಧದಲ್ಲಿ ಮಾದಲಿಯ ಪುಡಿ ಸಿದ್ಧ. ಆಮೇಲೆ, ಏಲಕ್ಕಿ, ಶುಂಠಿ, ಒಣ ಕೊಬ್ಬರಿ ಸೇರಿಸಿದರೆ ಆಯಿತು.
ಹುಕ್ಕೇರಿ ಮಠದ ಜಾತ್ರೆ ಆರಂಭವಾಗಿದ್ದು, ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸಲು ಮಾದಲಿ ಸಿದ್ಧವಾಗಿದೆ. ಮಾದಲಿ ಘಮ ಹುಕ್ಕೇರಿ ಜಾತ್ರೆ ತುಂಬ ಹರಡಿದ್ದು, ಆಕರ್ಷಿಸುತ್ತಿದೆ.