ಸುದ್ದಿ ಸಂಕ್ಷೇಪ
ಲೋಕಾ ಬಲೆಗೆ ಗ್ರಾಮಲೆಕ್ಕಿಗ
ಹಾನಗಲ್ಲ: ಕೃಷಿ ಜಮೀನಿನ ಖಾತಾ (ವಾರಸಾ) ಬದಲಾವಣೆ ಮಾಡಲು ಹಣ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಗುರುವಾರ ಸಂಜೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಕೂಡಲ ಗ್ರಾಮದ ಅಶೋಕ ಸಂಗಪ್ಪ ಗುಡ್ಡಪ್ಪನವರ, ಸಹೋದರರಾದ ಪ್ರವೀಣ ಹಾಗೂ ಶರಣಪ್ಪ ನರೇಗಲ್ಲ ವ್ಯಾಪ್ತಿಯ ಜಮೀನಿಗೆ ಸಂಬಂಧಿಸಿ ಖಾತಾ ಬದಲಾವಣೆಗಾಗಿ ವಾರಸಾ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ ನಾಗಪ್ಪ ಪೂಜಾರ ಸರ್ವೇ ನಂಬರ್ ಒಂದಕ್ಕೆ ತಲಾ ರು. 3 ಸಾವಿರದಂತೆ ಮೂರು ಖಾತೆಗಳಿಗೆ ರು. 9 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ದೂರುದಾರರು ತಿಳಿಸಿದ್ದಾರೆ. ಇಪ್ಪತ್ತು ದಿನಗಳ ಹಿಂದೆ ವಾರಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ ಪೂಜಾರ ವಾರಸಾ ಮಾಡದೆ ಸತಾಯಿಸಿದ್ದರು. ಬೇಸತ್ತ ಅಶೋಕ, ಲಂಚ ಬೇಡಿದ ವಿಷಯವನ್ನು ಮೊಬೈಲ್‌ನಲ್ಲಿ ಧ್ವನಿ ಮುದ್ರಿಸಿ, ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಅದರಂತೆ ತಂತ್ರ ಹೆಣೆಯಲಾಗಿತ್ತು. ಗ್ರಾಮ ಲೆಕ್ಕಾಧಿಕಾರಿ ಗುರುವಾರ ಸಂಜೆ ಬಸ್ ನಿಲ್ದಾಣದ ಬಳಿ ಹೋಟೆಲ್‌ಗೆ ಬಂದು ಲಂಚದ ಹಣ ಕೊಡಲು ಸೂಚಿಸಿದ್ದರು. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಲೋಕಾಯುಕ್ತ ಹಾವೇರಿ ವಿಭಾಗದ ಡಿಎಸ್ಪಿ ನಾಗರಾಜ ಅಂಬಲಿ, ದಾವಣಗೆರೆ ವಿಭಾಗದ ಇನ್‌ಸ್ಪೆಕ್ಟರ್ ಎಂ.ಕೆ. ಗಂಗಲ, ಸಿಬ್ಬಂದಿ ಐ.ಎಚ್. ಉಪ್ಪಾರ, ಎಂ.ಡಿ. ಹಿರೇಮಠ, ಪಿ.ಆರ್. ಭಾವಿಕಟ್ಟಿ, ಡಿ.ಎಸ್. ಬಿಲ್ಲರ, ಕೆ.ಎಂ. ಹಿರೇಮಠ, ಎಸ್.ಎನ್. ಹಿರೇಮಠ ಇದ್ದರು.
ಮಕ್ಕಳೇ ನಮ್ಮ ಆಸ್ತಿ: ಮಹಾಂತ ಸ್ವಾಮೀಜಿ
ಹಾವೇರಿ: ಪಾಲಕರು ಮಕ್ಕಳಿಗೆ ಆಸ್ತಿಯನ್ನು ಮಾಡಿದೆ, ಉತ್ತಮ ಸಂಸ್ಕಾರ, ಸಂಸ್ಕೃತಿ ಹಾಗೂ ಶಿಕ್ಷಣದ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ರಾಯನಾಡು ವಿರಕ್ತಮಠ ಮಹಾಂತ ಸ್ವಾಮೀಜಿ ಹೇಳಿದರು. ನಗರದ ಹುಕ್ಕೇರಿಮಠದಲ್ಲಿ ಮಂಗಳವಾರ ನಡೆದ ಶಿವಬಸವ ಶ್ರೀಗಳ 68ನೇ ಹಾಗೂ ಶಿವಲಿಂಗ ಶ್ರೀಗಳ 5ನೇ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕನಕಗಿರಿಯ ಡಾ ಚನ್ನಮಲ್ಲ ಶ್ರೀಗಳು ಮಾತನಾಡಿ, ಮಠಗಳು ಧಾರ್ಮಿಕ ಕಾರ್ಯಗಳ ಜತೆಗೆ ಅಕ್ಷರದ ಹಸಿವಿದ್ದರಿಗೆ ಜ್ಞಾನ ದಾಸೋಹ ಮಾಡುತ್ತಿವೆ. ಕವಲು ದಾರಿಯಲ್ಲಿರುವ ಸಮಾಜವನ್ನು ಸರಿದಾರಿಗೆ ತರುತ್ತಿದೆ. ಜನರ ಮನಸ್ಸು ಕಟ್ಟುವ ಕೆಲಸ ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟರು. ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಹಾನಗಲ್ ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಹಾಗೂ ನಗರಸಭೆ ಆಯುಕ್ತ ಶಿವಕುಮಾರಯ್ಯ ಅವರನ್ನು ಹುಕ್ಕೇರಿ ಮಠದ ವತಿಯಿಂದ ಸನ್ಮಾನಿಸಲಾಯಿತು. ಮುಂಡರಗಿ ಅನ್ನದಾನೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಗೂಬಲಗುಡ್ಡ ಮಠದ ಮಲ್ಲಿಕಾರ್ಜುನ ಶ್ರೀಗಳು, ಅಗರಖೇಡ ಅಭಿನವ ಪ್ರಭು ಸ್ವಾಮೀಜಿ ಇದ್ದರು. ಆರ್.ಎಸ್. ಮಡಿವಾಳ, ಬಿ.ವಿ. ಕನವಳ್ಳಿ, ಅಕ್ಕಮಹಾದೇವಿ ಹಾನಗಲ್ ಮತ್ತು ತಗಣಿಮಠ ಪ್ರಾರ್ಥಿಸಿದರು. ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯದರ್ಶಿ ವೀರಣ್ಣ ಅಂಗಡಿ ಸ್ವಾಗತಿಸಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹನುಮಂತಗೌಡ ಗೊಲ್ಲರ ನಿರೂಪಿಸಿದರು.
ಅನಕ್ಷರತೆ ಪ್ರಗತಿಗೆ ಮಾರಕ: ಮಾದರ
ಹಿರೇಕೆರೂರು: ಅನಕ್ಷರತೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಎಲ್ಲರನ್ನೂ ಸುಶಿಕ್ಷಿತರನ್ನಾಗಿಸಿ, ಜನಪರ ಯೋಜನೆಗಳನ್ನು ತಲುಪಿಸಿದರೆ ಸಮಾಜ ಅಭಿವೃದ್ಧಿಯಾಗಲು ಸಾಧ್ಯ. ಸಾಕ್ಷರತಾ ಸ್ವಯಂ ಸೇವಕರು 10 ಕಲಿಕಾರ್ಥಿಗಳಿಗೆ ಅಕ್ಷರದ ಅರಿವು ನೀಡುವ ಮೂಲಕ ದಾರಿ ದೀಪವಾಗಬೇಕು ಎಂದು ತಾಲೂಕು ಸಾಕ್ಷರತಾ ಸಂಯೋಜಕ ಮಾಲತೇಶ ಮಾದರ ಕರೆ ನೀಡಿದರು.
ಕೋಡ ಗ್ರಾಪಂ ಆವರಣದಲ್ಲಿ ಲೋಕ ಶಿಕ್ಷಣ ಸಮಿತಿ ವತಿಯಿಂದ ಜರುಗಿದ ಸಾಕ್ಷರ ಭಾರತ-2012 ಕಾರ್ಯಕ್ರಮದ ಸ್ವಯಂ ಸೇವಕರಿಗೆ 4 ದಿನಗಳ ಪಠ್ಯಾಧಾರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ವಾಸವಾಂಬ ಬಿಜಾಪುರ ಅಧ್ಯಕ್ಷತೆ ವಹಿಸಿದ್ದು, ತಾಪಂ ಸದಸ್ಯ ಸಣ್ಣಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಸದಸ್ಯರಾದ ಪಾರ್ವೆತವ್ವ ತುಮರಿಕೊಪ್ಪ, ರತ್ನಾ ಬಿಜಾಪುರ, ಸೋಮಶೇಖರ ಪೂಜಾರ, ಹನುಮಂತಪ್ಪ ನರಸಾಪುರ, ಹುಚ್ಚನಗೌಡ ಕಬ್ಬಕ್ಕಿ, ಬಸವಂತಪ್ಪ ಗ್ವಾಕನವರ, ಮುಖಂಡ ಗೋಣೆಪ್ಪ ಕಳಗೇರಿ, ಶಿಕ್ಷಕ ರಾಮು ಡಿ. ಕಿಟ್ಟದ, ಸಾಕ್ಷರತಾ ಪ್ರೇರಕರಾದ ಗೀತಾ ಹಾಗೂ ಸಾವಿತ್ರಾ ಇದ್ದರು.
ಆರೋಗ್ಯ, ಶಿಕ್ಷಣ ಪಡೆಯುವುದು ಎಲ್ಲರ ಹಕ್ಕು: ಖಾನ್
ಹಾವೇರಿ: ಮಾನವನಿಗೆ ಆರೋಗ್ಯ ಹಾಗೂ ಶಿಕ್ಷಣ ಮುಖ್ಯವಾಗಿದ್ದು, ಶಿಕ್ಷಣ ಪಡೆಯುವದು ಎಲ್ಲರ ಹಕ್ಕು ಎಂದು ಎಚ್.ಎಂ. ಖಾನ್ ಹೇಳಿದರು. ಶಿಕ್ಷಣ ಇಲಾಖೆಯಿಂದ ತಾಲೂಕಿನ ಕುಳೇನೂರ ಗ್ರಾಮದ ಬಯಲು ಬಸವೇಶ್ವರ ಸಭಾವನದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಪಾಲಕರಿಗಾಗಿ ಏರ್ಪಡಿಸಿದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದುಡಿಮೆಗಾಗಿ ವಲಸೆ ಬಂದವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಡಿವೈಎಸ್ಪಿ ಎಂ.ಎಸ್. ಗುಂಡಪಲ್ಲಿ, ಓದು ಬಾರದ ರಾಯಚೂರಿನ ಯುವಕ ಕಲಿಕೆಯಲ್ಲಿ ಮಾಡಿದ ಸಾಧನೆಯನ್ನು ವಿವರಿಸಿದರು. ವಿಷಯ ಪರಿವೀಕ್ಷಕ ಎಸ್.ಜಿ. ಕೋಟಿ ಮಾತನಾಡಿ, 6ರಿಂದ 14 ವರ್ಷದ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕೆಂದು ಹೇಳಿದರು. ಮಕ್ಕಳ ಮಾಹಿತಿಯನ್ನು ಅಂತರ್ಜಾಲದಲ್ಲಿ ಹಾಕಿದ್ದು, ಶಾಲೆಬಿಟ್ಟ ಹಾಗೂ ಹೊರಗಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು. ಕುಳೇನೂರ ಗ್ರಾಪಂ ಅಧ್ಯಕ್ಷ ರಮೇಶ ದೇವಗಿರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಮನ್ವಯಾಧಿಕಾರಿ ಕೆ.ಎಫ್. ಭಜಂತ್ರಿ, ಶಿಕ್ಷಣ ಸಂಯೋಜಕ ಸಿ.ಎಸ್. ಸನದಿ, ಪಂಚಾಯಿತಿ ಕಾರ್ಯದರ್ಶಿ ಬಸವರಾಜ ಚಂದ್ರಗೌಡ ಗಡಿಯಪ್ಪಗೌಡ್ರ ಹಾಗೂ ರಮೇಶ ನಾಯ್ಕ ಭಾಗವಹಿಸಿದ್ದರು. ಕಲಾವಿದರಾದ ಕೆ.ಆರ್. ಹಿರೇಮಠ, ಎ.ಬಿ. ಹುಡ್ಡಳ್ಳಿ, ಶಂಕರ ತಮ್ಮಣ್ಣನವರ, ಮುತ್ತುರಾಜ ಹಿರೇಮಠ, ವೀರೇಶ ಸಂಕಿನಮಠ, ಕೆ.ಎನ್. ಜಾನ್ವೇಕರ, ಗುಡ್ಡಪ್ಪ ಬಾರ್ಕಿ, ಇ.ಸಿ. ಅಗಸೀಬಾಗಿಲ, ಹನುಮಂತಪ್ಪ ಕರವಾಳಿ ಸಾಕ್ಷರತೆಯ ಮಹತ್ವ ಸಾರುವ ನಾಟಕ ಪ್ರದರ್ಶಿಸಿದರು. ಸಿಆರ್‌ಪಿ ಜೆ.ಎಂ. ದೊಡ್ಡಮನಿ ಸ್ವಾಗತಿಸಿದರು. ಶಿಕ್ಷಕ ಮನ್ವಾಚಾರಿ ನಿರೂಪಿಸಿದರು.