ಕಸಾಪ ಅಧ್ಯಕ್ಷರ ಹೇಳಿಕೆಗೆ ವ್ಯಾಪಕ ವಿರೋಧ
ಕನ್ನಡಪ್ರಭ ವಾರ್ತೆ, ಹಾವೇರಿ, ಜ. 10
ಬಹು ವರ್ಷಗಳ ಬೇಡಿಕೆ ಫಲವಾಗಿ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸಲು ಮಡಿಕೇರಿ ಸಮ್ಮೇಳನದಲ್ಲಿ ಘೋಷಣೆ ಮಾಡಲಾಗಿದೆ. ಹಾವೇರಿ ಬದಲಾಗಿ ಜಿಲ್ಲೆಯ ಬೇರೆ ಸ್ಥಳದಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಕಸಾಪ ಜಿಲ್ಲಾಧ್ಯಕ್ಷರು ನೀಡಿರುವ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇದರಿಂದ ಸಮ್ಮೇಳನಕ್ಕೆ ಆರಂಭದಲ್ಲೇ ಅಪಶ್ರುತಿ ಎದ್ದಂತಾಗಿದೆ.
ಮಡಿಕೇರಿಯಲ್ಲಿ ನಡೆದ ನುಡಿ ಜಾತ್ರೆಯಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸುವ ತೀರ್ಮಾನ ಕೈಗೊಂಡು ಘೋಷಣೆಯಾಗಿತ್ತು. ಇದರ ಬೆನ್ನಲ್ಲೇ ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಜಿ.ಎಸ್. ಮಾಸಣಗಿ ಅವರು ಜಿಲ್ಲೆಯ ರಾಣಿಬೆನ್ನೂರಲ್ಲಿ ಸಮ್ಮೇಳನ ನಡೆಸುವ ಕುರಿತು ನೀಡಿದ ಹೇಳಿಕೆ ಈಗ ಗೊಂದಲ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಸಾಹಿತ್ಯಾಸಕ್ತರು ಈ ಬಗ್ಗೆ ಅಕ್ರೋಶ ಹೊರಹಾಕುತ್ತಿದ್ದು, ಯಾವುದೇ ಕಾರಣಕ್ಕೂ ಹಾವೇರಿಯಿಂದ ಹೊರಗೆ ಸಮ್ಮೇಳನ ನಡೆಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷರ ಹೇಳಿಕೆ ಆರಂಭದಲ್ಲೇ ವಿಘ್ನ ತಂದಿಟ್ಟಂತಾಗಿದ್ದು, ಇದು ಜಿಲ್ಲೆಯ ಸಾಹಿತ್ಯಾಸಕ್ತರನ್ನು ಒಡೆಯುವ ಹುನ್ನಾರ ಎಂಬ ಆರೋಪ ಕೇಳಿ ಬರುತ್ತಿದೆ.
ಜಿಲ್ಲಾಧ್ಯಕ್ಷರ ನಿಲುವೇನು: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಎಸ್. ಮಾಸಣಗಿ ಅವರು ಮಡಿಕೇರಿಯಲ್ಲಿ ಮಾತನಾಡಿ, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸಲಾಗುವುದು ಎಂಬ ಹೇಳಿಕೆ ಈಗ ಗದ್ದಲಕ್ಕೆ ಕಾರಣವಾಗಿದೆ.
ಈ ಕುರಿತು ಕನ್ನಡಪ್ರಭ ಅವರನ್ನು ಕೇಳಿದಾಗ, ರಾಣಿಬೆನ್ನೂರಿನಲ್ಲಿ ಹಾವೇರಿಗಿಂತ ಮೂಲಸೌಲಭ್ಯ ಹೆಚ್ಚಿದೆ. ವಸತಿ, ಕಾರ್ಯಕ್ರಮಕ್ಕೆ ಅನುಕೂಲಕರ ವಾತಾವರಣವಿದೆ. ಆದ್ದರಿಂದ ಸಮ್ಮೇಳನಕ್ಕೆ ಬರುವವರಿಗೆಲ್ಲ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹೀಗೆ ಹೇಳಿದ್ದೇನೆ. ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಆಕ್ರೋಶ: ಈಗಾಗಲೇ ಮುಂದಿನ ಸಮ್ಮೇಳನ ಹಾವೇರಿಯಲ್ಲಿ ಎಂಬ ನಿರ್ಧಾರ ಪ್ರಕಟಿಸಲಾಗಿದೆ. ಇದುವರೆಗೆ ಸುಮ್ಮನಿದ್ದ ಜಿಲ್ಲಾಧ್ಯಕ್ಷ ಮಾಸಣಗಿ ಅವರು ಈಗ ರಾಣಿಬೆನ್ನೂರು ಎಂದು ಸ್ಥಳ ಬದಲಿಸುವುದು ಸರಿಯಲ್ಲ. ಜನರ ಅಭಿಪ್ರಾಯ ಹಾಗೂ ಕಸಾಪ ಕೇಂದ್ರ ಸಮಿತಿ ನಿರ್ಧಾರ ಹಾವೇರಿಯಲ್ಲೇ ನಡೆಯಬೇಕು ಎಂದಾಗಿದೆ. ಇದನ್ನು ಬಿಟ್ಟು ರಾಣಿಬೆನ್ನೂರಲ್ಲಿ ಸಮ್ಮೇಳನ ನಡೆಸುವುದಾದರೆ ಸಮ್ಮೇಳನವೇ ಬೇಡ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಹೀಗೆ ಹೆಮ್ಮರವಾಗುವ ಲಕ್ಷಣ ಕಾಣುತ್ತಿದ್ದು, ಕಸಾಪ ಜಿಲ್ಲಾಧ್ಯಕ್ಷರು ತಮ್ಮ ವೈಯಕ್ತಿಕ ನಿರ್ಧಾರ ಬದಲಿಸಿ, ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸಾಹಿತ್ಯಾಸಕ್ತರ ಆಶಯದಂತೆ ನಡೆದುಕೊಳ್ಳಬೇಕು ಎಂಬ ಕೂಗು ಎದ್ದಿದೆ.
ರಾಣಿಬೆನ್ನೂರಲ್ಲೇ ಸಮ್ಮೇಳನ ನಡೆಸುವುದಿದ್ದರೆ ಹಾಗೆಯೇ ಘೋಷಣೆ ಮಾಡಬಹುದಿತ್ತು. ಈ ಹಿಂದೆ ಗಂಗಾವತಿಯಲ್ಲಿ ಸಮ್ಮೇಳನ ನಡೆಸಿದಾಗಲೂ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಾದರೂ ಮಾಡಬಹುದು ಎಂದು ಹೇಳಿಲ್ಲ. ಈಗಲೂ ಹಾವೇರಿಯಲ್ಲೇ ಮಾಡಲು ಕೇಂದ್ರ ಸಮಿತಿ ನಿರ್ಧರಿಸಿದೆ. ಆದ್ದರಿಂದ ಹಾವೇರಿ ನಗರದಲ್ಲೇ ಸಮ್ಮೇಳನ ನಡೆಸಬೇಕು ಎಂಬುದು ಜನರ ವಾದವಾಗಿದೆ. ಈ ಬಗ್ಗೆ ಪತ್ರಿಕೆ ಹಲವು ಸಾಹಿತ್ಯಾಸಕ್ತರನ್ನು ಮಾತನಾಡಿಸಿದಾಗ ಅವರು ನೀಡಿದ ಹೇಳಿಕೆ ಆಕ್ರೋಶದಿಂದ ಕೂಡಿತ್ತು.
ಯೋಚನೆ ಮಾಡಬಾರದು: ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಡಿಗೋದಿ ಮಾತನಾಡಿ, ಹಾವೇರಿಯಲ್ಲಿ ಸಮ್ಮೇಳನ ಎಂದು ಘೋಷಣೆಯಾದ ಮೇಲೆ ಈ ರೀತಿ ಹೇಳಿಕೆಗೆ ಆಸ್ಪದವೇ ಇಲ್ಲ. ಅಲ್ಲದೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನವಾಗಬೇಕೇ ಹೊರತು ಜಿಲ್ಲಾಧ್ಯಕ್ಷರೊಬ್ಬರೆ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯ ಪಡೆದೇ ತೀರ್ಮಾನಕ್ಕೆ ಬರಬೇಕು. ಅಲ್ಲದೇ, ಹಾವೇರಿಯಲ್ಲಿ ಸಮ್ಮೇಳನ ನಡೆಸಬೇಕು ಎಂಬ ಬೇಡಿಕೆ ಈಗಿನದ್ದಲ್ಲ. ಈಗ ಅವಕಾಶ ಸಿಕ್ಕಿದ್ದು, ಅದನ್ನು ಬೇರೆ ಕಡೆ ಮಾಡುವ ನಿರ್ಧಾರದ ಬಗ್ಗೆ ಯೋಚಿಸಲೂ ಬಾರದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿ ಸಮ್ಮೇಳನ ನಡೆಸಲು ಚಿಂತನೆ ನಡೆಸಬೇಕೆಂದರು.
ಇದೇ ರೀತಿ ಜಿಲ್ಲೆಯ ಪ್ರಮುಖ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಯಾರೊಬ್ಬರೂ ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಯಲಿ ಎಂದು ಹೇಳುತ್ತಿಲ್ಲ. ಹೀಗಿದ್ದಾಗ ಅನಗತ್ಯ ಗೊಂದಲ ಸೃಷ್ಟಿಸುವ ಹೇಳಿಕೆ ನೀಡಿರುವ ಜಿಲ್ಲಾಧ್ಯಕ್ಷ ಮಾಸಣಗಿ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದು ಸೂಕ್ತ ಎಂಬುದು ಎಲ್ಲರ ಒತ್ತಾಯ. ವೈಯಕ್ತಿಕ ಪ್ರತಿಷ್ಠೆಗೆ ಮುಂದಾದರೆ ಮುಂದೆ ಬೆಲೆ ತೆರಬೇಕಾದೀತು ಎಂಬ ಎಚ್ಚರಿಕೆಯ ಸಂದೇಶವನ್ನೂ ಜಿಲ್ಲೆಯ ಜನ ನೀಡಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ನಾರಾಯಣ ಹೆಗಡೆ