ಸಮಸ್ಯೆ ನಿವಾರಣೆಗೆ ಒಗ್ಗಟ್ಟಿನ ಶ್ರಮ: ಅಧ್ಯಕ್ಷ, ಸದಸ್ಯರು
ರಾಣಿಬೆನ್ನೂರು: ತಾಲೂಕಿನ ಮೆಡ್ಲೇರಿ ಗ್ರಾಮದ ಸಮಸ್ಯೆಗಳ ಕುರಿತು 'ಮಲೀನವಾಗಿರುವ ಮೆಡ್ಲೇರಿ ಗ್ರಾಮ' ಎಂಬ ಶೀರ್ಷಿಕೆಯಡಿ ಜ. 10ರಂದು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಸುದ್ದಿಗೆ ಸ್ಪಂದಿಸಿ ಮೆಡ್ಲೇರಿ ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ದಿಳ್ಳೆಪ್ಪ ಅಣ್ಣೇರ ಹಾಗೂ 8 ಸದಸ್ಯರು ಲಿಖಿತವಾಗಿ ನೀಡಿರುವ ಹೇಳಿಕೆಯಲ್ಲಿ ಮೆಡ್ಲೇರಿ ಗ್ರಾಮಾಭಿವೃದ್ಧಿ ಹಾಗೂ ಸಮಸ್ಯೆಗಳ ನಿವಾರಣೆಗೆ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ನಮ್ಮ ಗ್ರಾಮವು ತಾಲೂಕಿನಲ್ಲಿಯೆ ದೊಡ್ಡ ಗ್ರಾಮವಾಗಿದ್ದು, 24 ಸಾವಿರ ಜನಸಂಖ್ಯೆ ಹೊಂದಿದ್ದು, ಸರ್ಕಾರ ಗ್ರಾಮ ಪಂಚಾಯಿತಿಗೆ ಈಗ ನೀಡುತ್ತಿರುವ ಅನುದಾನದಲ್ಲಿ ಗ್ರಾಮದ ಅಭಿವೃದ್ಧಿಗೆ ನಾವು ಶ್ರಮಿಸುತ್ತಿದ್ದು,ಬಯಲು ಶೌಚಾಲಯ ಮುಕ್ತ ಗ್ರಾಮ-ಸ್ವಚ್ಛ ಗ್ರಾಮವನ್ನಾಗಿಸಲು ಗ್ರಾಮದ ಸಮಸ್ತ ಜನತೆಯ ಸಹಕಾರ ಅಗತ್ಯವಾಗಿದ್ದು, ಗ್ರಾಮದಲ್ಲಿನ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ತುಂಬಬೇಕಾಗಿರುವ ತಮ್ಮ-ತಮ್ಮ ಮನೆಗಳ, ಇತರೆ ಆಸ್ತಿಗಳ (ಕರ) ಕಂದಾಯವನ್ನು ತುಂಬಲು ಮುಂದಾಗಬೇಕು ಎಂದರು. ವಾರಕ್ಕೊಮ್ಮೆ ರಸ್ತೆಯಲ್ಲೆ ನಡೆಸುತ್ತಿರುವ ಸಂತೆಯನ್ನು ಶೀಘ್ರ ಹೋರಬೀರೇಶ್ವರ ದೇವಸ್ಧಾನ ಸಮಿತಿಯವರ ಸಹಕಾರದೊಂದಿಗೆ ಹೋರಬೀರೇಶ್ವರ ದೇವಸ್ಧಾನದ ಆವರಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಸಲು ಕ್ರಮ ಕೈಗೊಳ್ಳುತ್ತೆವೆ. ಜಲನಿರ್ಮಲ ಯೋಜನೆಯಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿವ ನೀರು ಪೊರೈಸುತ್ತಿರುವ, ಗಟಾರದ ಪಕ್ಕದಲ್ಲಿರುವ ನಳಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ, ರಾಷ್ಟ್ರೀಯ ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆ, ನಿರ್ಮಲ ಭಾರತ ಅಭಿಯಾನ ಯೋಜನೆಯಡಿ, ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಲು, ಗ್ರಾಮದ 2 ಸಾವಿರ ಕುಟುಂಬಗಳು ಗ್ರಾಪಂಗೆ ಅರ್ಜಿ ಸಲ್ಲಿಸಿದ್ದು, 1008 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಅನುಮತಿ ನೀಡಲಾಗಿದೆ. 6 ತಿಂಗಳೊಳಗಾಗಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಸಂಕಲ್ಪ ತೊಟ್ಟಿದ್ದು, ಸಾರ್ವಜನಿಕರು, ಅಧಿಕಾರಿಗಳು ಸಹಕರಿಸಬೇಕೆಂದು ತಿಳಿಸಿದರು.