ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ: ಸ್ವಾಗತ
ಹಾವೇರಿ: ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ಬಳಿಕ ಬಹುಮತದೊಂದಿಗೆ 81ನೇ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸಬೇಕೆಂದು ನಿರ್ಣಯ ತೆಗೆದುಕೊಂಡಿರುವುದಕ್ಕೆ ಜಿಲ್ಲೆಯ ಜನರು ಹರ್ಷ ವ್ಯಕ್ತಪಡಿಸಿ, ಸ್ವಾಗತಿಸಿದ್ದಾರೆ. ಅಲ್ಲದೇ ಕೇಂದ್ರ ಪರಿಷತ್ ಅಧ್ಯಕ್ಷ ಹಾಲಂಬಿ ಮತ್ತು ಎಲ್ಲ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅಭಿನಂದಿಸಿದ್ದಾರೆ.
ಹಾವೇರಿ ಜಿಲ್ಲೆ ರಚನೆಯಾದ ನಂತರ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ನಡೆಯಬೇಕೆಂಬುವುದನ್ನು ಈ ಹಿಂದೆ ನಡೆದ ಗಂಗಾವತಿ, ಬಿಜಾಪುರ, ಗದಗ ಸಮ್ಮೇಳನಗಳಲ್ಲಿ ಒತ್ತಾಯಿಸಲಾಗಿತ್ತು. ಆದರೆ, ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿರಲಿಲ್ಲ. ಈಗ ಕಾಫಿ ನಾಡಿನ ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಬೇಕೆಂದು ನಿರ್ಣಯ ತೆಗೆದುಕೊಂಡಿರುವುದಕ್ಕೆ ಕನ್ನಡಪರ ಹೋರಾಟಗಾರರಾದ ಎಂ.ಎಸ್. ಕೋರಿಶೆಟ್ಟರ್, ಎಂ.ಎಸ್. ತಿಪ್ಪಶೆಟ್ಟಿ, ತೋಟಪ್ಪ ಕೊಟ್ರಪ್ಪ ಹಳ್ಳಿಕೇರಿ, ಬಾಬಣ್ಣ ಚೌಶಟ್ಟಿ, ಶಿವಬಸಪ್ಪ ಚೌಶಟ್ಟಿ, ಶಿವಣ್ಣ ಮಾಸೂರ, ಎಂ.ಬಿ. ಹಿರೇಮಠ, ಶಶಿಧರ ಡೊಂಕಣ್ಣನವರ, ಎಸ್.ಎಸ್. ಕಳ್ಳಿಮನಿ, ಶಂಬಣ್ಣ ಹಿಂಚಿಗೇರಿ, ಕರಬಸಪ್ಪ ಹೂಗಾರ, ಗಣೇಶಪ್ಪ ಹೂಗಾರ, ಎಸ್.ಎನ್.ದೊಡ್ಡಗೌಡ್ರ, ಅಶೋಕ ತಟಪಟ್ಟಿ, ಫ್ರಭು ಹಿಟ್ನಳ್ಳಿ, ಕೆಂಚಪ್ಪ ಲಿಂಗದಹಳ್ಳಿ, ಹರೀಶ ಕರ್ಜಗಿ, ಸಿದ್ದಪ್ಪ ನವಲಿ, ಬಸವರಾಜ ತಂಡೂರ, ಶಂಭು ಕಲ್ಯಾಣಿ, ರಮೇಶ ಮಾಳವದೆ, ಶಿವಮೂರ್ತ್ಯಪ್ಪ ಬೆಟಗೇರಿ, ಕುಮಾರಿ ಅನಸೂಯಾ ಎರವಿನತಲೆ, ವೀರಣ್ಣ ಹರನಗೇರಿ, ದಾನನಗೌಡ ಪಾಟೀಲ, ಶಶಿಧರ ಹಳ್ಳಿಕೇರಿ ಇತರರು ಸ್ವಾಗತಿಸಿದ್ದಾರೆ.
ಶರಣ ಸಾಹಿತ್ಯ ಪರಿಷತ್ ಸ್ವಾಗತ: ಸಾಹಿತ್ಯಿಕ, ಸಾಂಸ್ಕೃತಿಕ ರಾಜಧಾನಿ ಎನಿಸಿರುವ ಯಾಲಕ್ಕಿ ಕಂಪಿನ ಖ್ಯಾತಿಯ ಹಾವೇರಿಗೆ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸೌಭಾಗ್ಯ ಒಲಿದು ಬಂದಿರುವುದಕ್ಕೆ ಶರಣ ಸಾಹಿತ್ಯ ಪರಿಷತ್ ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದೆ. ಜಿಲ್ಲೆಯ ಸಾಹಿತಿ, ಕಲಾವಿದರು, ಸಾಹಿತ್ಯಾಸಕ್ತರು, ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರ ಬಹು ವರ್ಷಗಳ ಹೋರಾಟದ ಫಲಕ್ಕೆ ಕೊನೆಗೂ ಫಲ ದೊರೆತಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಶರಣ ಸಾಹಿತ್ಯ ಪರಿಷತ್ ಅಭಿನಂದಿಸುತ್ತದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಗೌಡ ಗೊಲ್ಲರ, ಕೋಶಾಧ್ಯಕ್ಷ ಎಸ್.ಆರ್. ಹಿರೇಮಠ, ಕಾರ್ಯದರ್ಶಿ ಕೃಷ್ಣಾ ಜವಳಿ, ವಾಸಣ್ಣ ಕೊಸಗೂರ, ಜಿ.ಎಂ. ದೇವಗಿರಿಮಠ, ದಾನೇಶ ಅಂಗಡಿ, ಎಸ್.ಕೆ. ಕಲ್ಲನಗೌಡ್ರ, ರೇಣುಕಾ ಗುಡಿಮನಿ, ಸಂಧ್ಯಾರಾಣಿ ದೇಶಪಾಂಡೆ ಇತರರು, ಭಾವೈಕ್ಯತೆ ಜಿಲ್ಲೆಯ ಜನತೆಯಲ್ಲಿ ನವೋಲ್ಲಾಸ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.