ಗೋವಿನಜೋಳ ಖರೀದಿ ವಿಳಂಬ: ಆಕ್ರೋಶ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜ. 11
ಪಟ್ಟಣದ ಎಪಿಎಂಸಿಯಲ್ಲಿ ಗೋವಿನಜೋಳ ಖರೀದಿ ಮಾಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ರೊಚ್ಚಿಗೆದ್ದ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಯತ್ನಿಸಿದ ಘಟನೆ ಶನಿವಾರ ಜರುಗಿದೆ.
ಶಿಗ್ಗಾಂವಿಯಲ್ಲಿ ಗೋವಿನ ಜೋಳ ಖರೀದಿ ಕೇಂದ್ರವನ್ನು ಡಿ. 23ರಂದು ಪ್ರಾರಂಭಿಸಲಾಗಿತ್ತು. ಡಿ. 30ರಿಂದ ಗೋವಿನಜೋಳ ಖರೀದಿ ಮಾಡಲು ಪ್ರಕ್ರಿಯೆ ಆರಂಭಿಸಲಾಯಿತು. ತಾಲೂಕಿನ ರೈತರು ಟ್ರ್ಯಾಕ್ಟರ್ ಬಾಡಿಗೆ ಪಡೆದು ಗೋವಿನಜೋಳ ತರಲಾರಂಭಿಸಿದರು. ಆದರೆ ಖರೀದಿ ಕೇಂದ್ರಕ್ಕೆ ತಂದು 2-3 ದಿನಗಳಾದರೂ ಖರೀದಿಗೆ ಅಧಿಕಾರಿಗಳು ಮುಂದಾಗಲಿಲ್ಲ. ಹೀಗಾಗಿ ರೈತರು ರೊಚ್ಚಿಗೆದ್ದರು. ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಯತ್ನಿಸಿದರು. ಆದರೆ ಸಮಯಕ್ಕೆ ಸರಿಯಾಗಿ ಪೊಲೀಸರು ರೈತರ ಮನವೊಲಿಸಿದರು.
ಗೋವಿನಜೋಳ ಹೇರಿಕೊಂಡು ಬಂದು ನಿಂತ ಟ್ರ್ಯಾಕ್ಟರ್ಗಳ ಟೈರ್ಗಳಿಗೆ ಜಾಕ್ ಹಚ್ಚಿ ನಿಲ್ಲಿಸುವಂತಾಗಿದೆ. ಇಲ್ಲದಿದ್ದರೆ ಟೈರ್ ಒಡೆಯುತ್ತವೆ. ಅಲ್ಲದೆ ತೂಕ ಮಾಡಿದ ಗೋವಿನಜೋಳ ಚೀಲವನ್ನು ಗೋದಾಮಿನಲ್ಲಿ ಇಳಿಸಿಕೊಳ್ಳದೆ, ಮತ್ತೊಮ್ಮೆ ವೇಬ್ರಿಜ್ನಲ್ಲಿ ತೂಕ ಮಾಡಿಸಿ ಎಂದು ಅಧಿಕಾರಿಗಳು ಹೇಳುತ್ತಾರೆ. ಒಮ್ಮೆ ವೇಬ್ರಿಜ್ ತೂಕಕ್ಕೆ ರು. 70 ನೀಡಬೇಕು. ತೂಕ ಮಾಡಿದ ಟ್ರ್ಯಾಕ್ಟರ್ನಲ್ಲಿದ್ದ ಮಾಲನ್ನು ಇಳಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಗೋದಾಮು ದೂರ
ಪಟ್ಟಣದಿಂದ ಸುಮಾರು 8 ಕಿಮೀ ದೂರದ ಮಾಕಾಪುರ ಖಾಸಗಿ ಗೋದಾಮಿಗೆ ಜೋವಿನಜೋಳ ತೆಗೆದುಕೊಂಡು ಬರುವಂತೆ ಹೇಳುತ್ತಿದ್ದಾರೆ. ಆದರೆ ಅಲ್ಲಿಯೂ ಕೂಡಾ ಗಾಡಿ ಖಾಲಿ ಮಾಡುತ್ತಿಲ್ಲ. ಅಲ್ಲಿ ಕಾಯಬೇಕೆಂದರೆ ಅಂಗಡಿ ಅಥವಾ ಹೋಟೆಲ್ ಇಲ್ಲ. ಎಪಿಎಂಸಿ ಅಧ್ಯಕ್ಷರು ಬೆಳಗ್ಗೆ 10 ಗಂಟೆಗೆ ಬಂದವರು 1 ಗಂಟೆಯಾದರೂ ನಮ್ಮ ಸಮಸ್ಯೆ ಬಗ್ಗೆ ಗಮನಹರಿಸಿಲ್ಲ ಎಂದು ದೂರಿದರು.
ಗೋವಿನಜೋಳ ಖರೀದಿಗೆ ತಕ್ಷಣ ವ್ಯವಸ್ಥೆ ಕಲ್ಪಿಸದಿದ್ದರೆ ಉಗ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತಾಲೂಕಿನ ರೈತರಾದ ಬೀರಪ್ಪ ಹೆಗಡೆ, ಶಂಭಣ್ಣಾ ಜವಳಿ, ಸತೀಶ ಮುರಾರಿ, ಪ್ರಶಾಂತ ಮುಡಣ್ಣವರ, ಅಲ್ತಾಫ್ ನದಾಫ್, ಮಾದೇವಪ್ಪ ಭವಾನಿ, ಮಲ್ಲಪ್ಪ ಶೇರೆವಾಡ, ಮಾಂತೇಶ ಹೇಳವರ ಇದ್ದರು.