ವಿವೇಕಾನಂದರ ವಿಚಾರ ಯುವ ಪೀಳಿಗೆಗೆ ಅಗತ್ಯ: ಬಿದರಿ
ಶಿಗ್ಗಾಂವಿ: ಸನಾತನ ಧರ್ಮವನ್ನು ದೇಶ ವಿದೇಶದಲ್ಲಿ ಪ್ರಚಾರ ಮಾಡಿ, ವಿವೇಕಾನಂದರು ವಿಶ್ವಕ್ಕೆ ಮಾದರಿಯಾದರು. ಅವರ ಆದರ್ಶಗಳು ಯುವ ಪೀಳಿಗೆಗೆ ಮಾದರಿ ಎಂದು ಎಬಿವಿಪಿ ರಾಷ್ಟ್ರೀಯ ಘಟಕದ ಕಾರ್ಯದರ್ಶಿ ವಿನಯ ಬಿದರಿ ಹೇಳಿದರು. ಸಂಗನಬಸವ ಮಂಗಲ ಭವನದಲ್ಲಿ ಎಬಿವಿಪಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 151ನೇ ಜಯಂತ್ಯುತ್ಸವ ಅಂಗವಾಗಿ ನಡೆದ ಯುವಜನ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ನೀತಿಯಿಲ್ಲದ ಶಿಕ್ಷಣ ಮತ್ತು ಕಾನೂನಿನಿಂದ ದೇಶದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದರು. ಎಬಿವಿಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಸಿದ್ದು ಮದರಕಂಡಿ, ಜಿಲ್ಲಾ ಸಂಚಾಲಕ ವೀರೇಶ ಹಿರೇಮಠ, ತಾಲೂಕು ಅಧ್ಯಕ್ಷ ಮಂಜುನಾಥ, ಎನ್.ಎಸ್. ನಿರ್ಮಲಾ, ಐ.ಕೆ. ವೀಣಾ, ಎಸ್.ಕೆ. ಕಸ್ತೂರಿ ಇದ್ದರು. ರಂಜಿತಾ ರಾಮನಕೊಪ್ಪ ಸ್ವಾಗತಿಸಿದರು. ಅರುಣ ನಿರೂಪಿಸಿದರು. ವಿವೇಕಾನಂದರ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ ಜರುಗಿತು.