ಕಬ್ಬಿನಿಂದ ಸಿಹಿಯಾಗಲಿ ಬದುಕು
ಹಾವೇರಿ: ಕಬ್ಬು ಉತ್ತಮವಾಗಿ ಬೆಳೆದರೆ ಜೀವನವೇ ಸಿಹಿಯಾಗಿ ಬೆಳೆದ ರೈತನ ಬದುಕು ಹಸನಾಗುವುದು ಎಂದು ಕಬ್ಬು ಬೆಳೆಯಲ್ಲಿ ದಾಖಲೆ ಮಾಡಿರುವ ಅಥಣಿ ತಾಲೂಕಿನ ಶೇಡಬಾಳದ ಪ್ರಗತಿಪರ ರೈತ ಸೂರಗೌಡ ಪಾಟೀಲ ಹೇಳಿದರು.
ಗುತ್ತಲದ ಮಂಜುನಾಥ ಶೀತಾಳ ಅವರ ಜಮೀನಿನಲ್ಲಿ ಭಾನುವಾರ ನಡೆದ ಕಬ್ಬು ಬೆಳೆಗಾರರ ವಿಚಾರ ಸಂಕಿರಣದಲ್ಲಿ ರೈತರನುದ್ದೇಶಿಸಿ ಮಾತನಾಡಿದರು. ಕಬ್ಬನ್ನು ಯೋಜನಾಬದ್ಧವಾಗಿ ಬೆಳೆದರೆ ಹಾಗೂ ಅದಕ್ಕೆ ಕಾಲಕಾಲಕ್ಕೆ ಬೇಕಾದ ರಸಗೊಬ್ಬರ ನೀಡಿದರೆ ಉತ್ತಮ ಬೆಳೆ ಬರುವುದರಲ್ಲಿ ಅನುಮಾನವೇ ಇಲ್ಲ. ರೈತರು ಸರಿಯಾಗಿ ಮಾಹಿತಿ ಪಡೆದು ಕಬ್ಬು ಬೆಳೆಯಬೇಕು ಎಂದು ಹೇಳಿದರು.
ಕೋರಮಂಡಲ್ ಕಂಪನಿ ವಿಭಾಗೀಯ ಹಿರಿಯ ವ್ಯವಸ್ಥಾಪಕ ಸಿ. ನಾಗರಾಜ ಮಾತನಾಡಿ, ಕಬ್ಬನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲು ಇರುವ ಮಾರ್ಗೋಪಾಯ ತಿಳಿಸಿದರು. ರೈತರಿಗೆ ದೊರೆಯುವ ಪ್ರಯೋಜನಗಳ ಮಾಹಿತಿ ನೀಡಿದರು. ರೈತರ ಪ್ರಶ್ನೆಗಳಿಗೆ ತಜ್ಞರು, ಪ್ರಗತಿಪರ ರೈತರು ಉತ್ತರಿಸಿ, ರೈತರಲ್ಲಿ ಕಬ್ಬುನ್ನು ಬೆಳೆಯುವ ಹಂತದಲ್ಲಿ ರೈತರಿಗೆ ಆಗುವ ತೊಂದರೆಗಳನ್ನು ನಿವಾರಿಸಿದರು.
ಎನ್.ಎಂ. ಶೀತಾಳ ವಿಚಾರ ಸಂಕಿರಣ ಉದ್ಘಾಟಿಸಿದರು. ಹಾವೇರಿ ಎಪಿಎಂಸಿ ಅಧ್ಯಕ್ಷ ಮುರುಗೆಪ್ಪ ಅಂಗಡಿ, ಬೆಂಗಳೂರ ಅಪೆಕ್ ಬ್ಯಾಂಕ್ ನಿರ್ದೇಶಕ ಮುತ್ತಣ್ಣ ಯಲಿಗಾರ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಅಶೋಕರಡ್ಡಿ ಮರ್ಚರ ರಡ್ಡೇರ, ಜೆಎಂ ಶುಗರ್ಸ್‌ನ ಹಿರಿಯ ಸಿಇಒ ಎಂ.ಬಿ. ಪಾಟೀಲ್, ಕಲಘಟಗಿಯ ಪ್ರಗತಿಪರ ರೈತರಾದ ಮೋಹನ್ ಪಂಡಿತ್, ಉಮೇಶ ಕೊಪ್ಪದ, ಕೋರಮಂಡಲ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಸಿದ್ದೇಶ್ ಹುಂಡೇಕರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗೇಂದ್ರಪ್ಪ ಮುದ್ದಿ, ಕಂಚಾರಗಟ್ಟಿ ಗ್ರಾಪಂ ಮಾಜಿ ಅಧ್ಯಕ್ಷ ಹಾಲಪ್ಪ ನೆಗಳೂರ ಇದ್ದರು.